ಅಧಿಕಾರಿಗಳಿಂದ ರೋಗ ಬಾಧಿತ ಶುಂಠಿ ಬೆಳೆ ವೀಕ್ಷಣೆ

09BTP03
Published on

ಹನಗೋಡು: ಹೋಬಳಿ ವ್ಯಾಪ್ತಿಯಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ವೈರಸ್ (ಮಜ್ಜಿಗೆ ರೋಗ) ಬಾಧಿತ ಶುಂಠಿ ಬೆಳೆ ಜಮೀನುಗಳಿಗೆ ಹುಣಸೂರು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ.ಎಚ್.ನಾಗರಾಜ್ ಹಾಗೂ ಸಿಬ್ಬಂದಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜು.4ರಂದು ವಿಜಯವಾಣಿಯಲ್ಲಿ ‘ಶುಂಠಿ ಬೆಳೆಗೆ ಮಜ್ಜಿಗೆ ರೋಗ’ಎಂಬ ಶೀರ್ಷಿಕೆಯಡಿ ಶುಂಠಿ ರೋಗಕ್ಕೆ ಹೊಸ ವೈರಸ್ ಕಾಣಿಸಿಕೊಂಡು ಬೆಳೆ ಎಲ್ಲ ಹಾನಿಯಾಗಿ ರೈತರು ಸಂಕಷ್ಟಕ್ಕೀಡಾಗಿರುವ ಬಗ್ಗೆ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಳೆದೆರಡು ದಿನಗಳಿಂದ ಹನಗೋಡು ಹೋಬಳಿಯ ಹಿಂಡಗುಡ್ಲು ಗ್ರಾಮದ ರಾಜೇಗೌಡ, ಕಚುವಿನಹಳ್ಳಿ ಲೋಕೇಶ್, ಎನ್.ಕೆ.ಮಹದೇವ್ ಸೇರಿದಂತೆ ಇತರ ರೈತರ ಜಮೀನುಗಳಿಗೆ ಭೇಟಿ ನೀಡಿ ಹೊಸ ವೈರಸ್‌ನಿಂದಾಗಿ ಹಾನಿಯಾಗಿರುವ ಶುಂಠಿ ಬೆಳೆಯನ್ನು ಪರಿಶೀಲನೆ ನಡೆಸಿದರು.

ಹಿರಿಯ ಸಹಾಯಕ ನಿರ್ದೇಶಕ ಡಾ.ಎಚ್.ನಾಗರಾಜ್ ಮಾತನಾಡಿ, ಇದು ಮಜ್ಜಿಗೆ ರೋಗವಾಗಿದ್ದು, ಹೆಚ್ಚು ಶೀತಾಂಶದಿಂದ ಕೂಡಿದ ಪ್ರದೇಶದಲ್ಲಿ ಬರುತ್ತದೆ. ಹನಗೋಡು ಭಾಗ ಕಾಡಂಚಿನ ಪ್ರದೇಶವಾಗಿರುವುದರಿಂದ ಈ ಭಾಗದಲ್ಲಿ ಕಾಣಿಸಿಕೊಂಡಿದ್ದು, ಇದು ವೇಗವಾಗಿ ಹರಡಿ ಕೆಲವೇ ಗಂಟೆಗಳ ಅವಧಿಯಲ್ಲಿ ಈ ಹೊಲವನ್ನೇ ಆವರಿಸಿಕೊಳ್ಳುವ ಶಿಲೀಂಧ್ರವಾಗಿದೆ. ಇದನ್ನು ನಾಶಪಡಿಸಲು ರೋಗಬಾಧೆ ಕಂಡು ಬಂದಿರುವ ಶುಂಠಿ ಬೆಳೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 1.0 ಮಿ.ಲೀ.ಪ್ರೊಪಿಕೋನಜೋಲ್ ಅಥವಾ ಟೆಬುಕೊನಜೋಲ್ 1.0 ಮಿ.ಲೀ. ಶಿಲೀಂಧ್ರನಾಶಕ ಅಂಟು ದ್ರಾವಣವನ್ನು ಸೇರಿಸಿ ಮಳೆ ಬಿಡುವು ಕೊಟ್ಟಾಗ ರೈತರು ತ್ವರಿತಗತಿಯಲ್ಲಿ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ. ಇದಲ್ಲದೆ ಕೊಳೆರೋಗ ಬಾಧೆ ನಿಯಂತ್ರಿಸಲು ಬಾವಿಷ್ಟನ್ ಔಷಧವನ್ನು ಪ್ರತಿ ಲೀಟರ್ ನೀರಿಗೆ 2 ಗ್ರಾಂ ಮಿಶ್ರಣ ಮಾಡಿ ಶುಂಠಿ ಬೆಳೆ ಬುಡಕ್ಕೆ ಸುರಿಯಬೇಕು. ಎಲೆಚುಕ್ಕಿ ರೋಗಬಾಧೆ ನಿಯಂತ್ರಿಸಲು ಕಾವಾಚ್ ಅನ್ನು ಪ್ರತಿ ಲೀಟರ್ ನೀರಿಗೆ ಒಂದು ಗ್ರಾಂ ಅಥವಾ ಮಾಂಕೋಜಿಬ್ ಪ್ರತಿ ಲೀಟರ್ ನೀರಿಗೆ 2 ಗ್ರಾಂ ಮಿಶ್ರಣ ಮಾಡಿ ಸಿಂಪಡಿಸಬೇಕು ಎಂದು ರೈತರಿಗೆ ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net