

ಮದ್ದೂರು: ತಾಲೂಕಿನ ತೊಪ್ಪನಹಳ್ಳಿ ಗ್ರಾಮದ ಶ್ರೀಕದಂಬ ಕ್ಷೇತ್ರದ ಮುತ್ತುರಾಯಸ್ವಾಮಿ ಹರಿಸೇವೆ ಉತ್ಸವ ಶನಿವಾರ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಶುಕ್ರವಾರ ಬೆಳಗ್ಗೆ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿತ್ತಲ್ಲದೆ, ಸ್ವಾಮಿಗೆ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಪೂಜಾ ವಿಧಿ-ವಿಧಾನಗಳು ಜರುಗಿದ ಬಳಿಕ ಶ್ರೀಸೀತಾರಾಮಲಕ್ಷ್ಮಣ ದೇವಾಲಯದಲ್ಲೂ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.
ಶನಿವಾರ ಬೆಳಗ್ಗೆ 8 ಗಂಟೆಗೆ ಪೂಜಾ ಕಾರ್ಯಕ್ರಮಗಳು ನೆರವೇರಿದ ಬಳಿಕ ಸುಮಾರು 10 ಸಾವಿರ ಜನರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತಲ್ಲದೆ, ರಾಜೇಗೌಡನದೊಡ್ಡಿ, ಕೆ.ಹೊನ್ನಲಗೆರೆ, ಚಂದಹಳ್ಳಿದೊಡ್ಡಿ ಇನ್ನಿತರ ಗ್ರಾಮದ ಗ್ರಾಮಸ್ಥರು ಹರಿಸೇವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜಿಲ್ಲೆ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಬಸವಪ್ಪನವರ ಆಶೀರ್ವಾದ ಪಡೆಯುವ ಜತೆಗೆ ಹೊತ್ತಿದ್ದ ಹಲವು ಹರಕೆಗಳನ್ನು ತೀರಿಸಿದರು.