ಅದ್ದೂರಿ ಗಣೇಶೋತ್ಸವಕ್ಕೆ ಸಿದ್ಧತೆ!

bkt-1-1.
ಬಾಗಲಕೋಟೆ ನಗರದ ಗಣೇಶ ಮೂರ್ತಿಗಳು.
Published on

ಸಂತೋಷ ಕೃ.ದೇಶಪಾಂಡೆ
ಬಾಗಲಕೋಟೆ: ಹಿಂದುಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಗಣೇಶ ಉತ್ಸವಕ್ಕೆ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳು ಆರಂಭಗೊಂಡಿವೆ. ಜಿಲ್ಲೆಯಲ್ಲಿ ಅದ್ದೂರಿಯಾಗಿ ಹಬ್ಬಕ್ಕೆ ಸಾರ್ವಜನಿಕರು ಉತ್ಸುಕರಾಗಿದ್ದಾರೆ. ಕೋಟೆನಾಡಿನಲ್ಲಿ ಗಣೇಶ ಹಬ್ಬಕ್ಕೆ ನಿರೀಕ್ಷೆಗಳು ಗರೆಗೆದರಿವೆ...!

ಜಿಲ್ಲಾ ಕೇಂದ್ರ ಬಾಗಲಕೋಟೆ, ಮುಧೋಳ, ಜಮಖಂಡಿ, ರಬಕವಿ-ಬನಹಟ್ಟಿ, ತೇರದಾಳ, ಲೋಕಾಪುರ, ಬೀಳಗಿ, ಬಾದಾಮಿ, ಕಲಾದಗಿ, ಹುನಗುಂದ, ಇಳಕಲ್ಲ, ಕಮತಗಿ, ಗುಳೇದಗುಡ್ಡ, ಅಮೀನಗಡ ಸೇರಿದಂತೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬಕ್ಕೆ ಭರ್ಜರಿ ತಯಾರಿ ನಡೆದಿದೆ. ಜಿಲ್ಲಾಡಳಿತ, ಆಯಾ ತಾಲೂಕು ಆಡಳಿತ, ಪೊಲೀಸ್ ಇಲಾಖೆಗಳು ಸಭೆ ನಡೆಸಿ ಶಾಂತಿಯುತವಾಗಿ ಹಬ್ಬ ಆಚರಿಸಲು ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಆಚರಣಾ ಸಮಿತಿಗಳ ಕಾರ್ಯ ಚುರುಕುಗೊಂಡಿದೆ.

ಜಿಲ್ಲೆಯಲ್ಲಿ ಮಾರುಕಟ್ಟೆಗೆ ಹೊಸ ಬಗೆಯ ಗಣೇಶ ಮೂರ್ತಿಗಳು ಲಗ್ಗೆ ಇಟ್ಟಿವೆ. ಚಿಕ್ಕ, ಮಧ್ಯಮ ಹಾಗೂ ದೊಡ್ಡ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ಆಚರಣಾ ಸಮಿತಿಗಳು ದೊಡ್ಡ ಮೂರ್ತಿಗಳನ್ನು, ಸಾರ್ವಜನಿಕರು ಮನೆಗಳಲ್ಲಿ ಸ್ಥಾಪಿಸಲು ಸಣ್ಣ ಮೂರ್ತಿಗಳನ್ನು ಬುಕ್ಕಿಂಗ್ ಮಾಡುತ್ತಿದ್ದಾರೆ. ಗಣೇಶ ಉತ್ಸವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಅಲಂಕಾರಿಕ ವಸ್ತುಗಳು ರಾರಾಜಿಸುತ್ತಿವೆ. ಶಾಮಿಯಾನ್, ವಿದ್ಯುತ್ ದೀಪಾಲಂಕಾರ, ಸೌಂಡ್ ಸಿಸ್ಟಮ್ ಕೆಲಸಗಾರರು ಹಾಗೂ ಬ್ಯಾಂಜೋ- ಬ್ಯಾಂಡ್ ಕಲಾವಿದರಲ್ಲಿ ಉದ್ಯೋಗ ದೊರೆಯುವ ಭರವಸೆ ಮೂಡಿದೆ. ಹಬ್ಬಕ್ಕಾಗಿ ವಿಶೇಷ ತಿಂಡಿ-ತಿನಿಸು ತಯಾರಿಸಲು ವ್ಯಾಪಾರಸ್ಥರು ಕಾಯುತ್ತಿದ್ದಾರೆ.

ಜಿಲ್ಲೆಯಲ್ಲಿ ಮತ್ತೆ ಪಿಒಪಿ ಸದ್ದು:
೨೦೧೭ ರಲ್ಲಿ ಪರಿಸರ ಮಾರಕ ಪ್ಲಾಸ್ಟರ್ ಆಫ ಪ್ಯಾರೀಸ್(ಪಿಒಪಿ) ಗಣೇಶ ಮೂರ್ತಿಗಳನ್ನು ಸರ್ಕಾರ ನಿಷೇಧ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಕಠಿಣ ಕ್ರಮ ತೆಗೆದುಕೊಂಡ ಪರಿಣಾಮ ಪಿಒಪಿ ಹಾವಳಿ ಬಹುತೇಕ ಕ್ಷೀಣಿಸಿತ್ತು. ಆದರೇ ಈ ವರ್ಷ ಬಾಗಲಕೋಟೆ, ಮುಧೋಳ, ಗುಳೇದಗುಡ್ಡ, ಲೋಕಾಪುರ, ಜಮಖಂಡಿ ಸೇರಿದಂತೆ ಎಲ್ಲೆಡೆ ಪಿಒಪಿ ಮೂರ್ತಿಗಳು ಮಾರಾಟವಾಗುತ್ತಿವೆ. ಇದು ಮೂರ್ತಿ ತಯಾರಕರ ಅಸಮಾಧಾನಕ್ಕೆ ಕಾರಣವಾಗಿದೆ. ಎಲ್ಲರಿಗೂ ಒಂದೇ ನಿಯಮ ಪಾಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಹುತೇಕ ಗಣೇಶ ಮೂರ್ತಿ ತಯಾರಕರು ಪಿಒಪಿ ಗಣೇಶ ಮೂರ್ತಿ ತಯಾರಿಕೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ. ಆದರೆ, ಬೆಳಗಾವಿ ಜಿಲ್ಲೆಯ ಗೋಕಾಕ, ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯದಿಂದ ಅಧಿಕ ಪ್ರಮಾಣದಲ್ಲಿ ಪಿಒಪಿ ಮೂರ್ತಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವವರು ಯಾರು ಎನ್ನುವ ಪ್ರಶ್ನೆ ಮೂಡಿದೆ.

ಪೊಲೀಸ್ ಇಲಾಖೆ ಮಾಹಿತಿ ಪ್ರಕಾರ ಬಾಗಲಕೋಟೆ-ನವನಗರದಲ್ಲಿ ೧೫೦, ಬಾಗಲಕೋಟೆ ಗ್ರಾಮೀಣ ಭಾಗದಲ್ಲಿ ೨೧೮, ಇಳಕಲ್ಲ, ಅಮೀನಗಡ ಸೇರಿ ಹುನಗುಂದ ತಾಲೂಕು ವ್ಯಾಪ್ತಿಯಲ್ಲಿ ೨೬೦, ಗುಳೇದಗುಡ್ಡ, ಕೆರೂರ ಸೇರಿ ಬಾದಾಮಿ ತಾಲೂಕು ವ್ಯಾಪ್ತಿಯಲ್ಲಿ ೨೭೨, ಜಮಖಂಡಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ೨೬೮, ತೇರದಾಳ ವ್ಯಾಪ್ತಿಯಲ್ಲಿ ೨೮೦, ಲೋಕಾಪುರ, ಮಹಾಲಿಂಗಪುರ ಹಾಗೂ ಮುಧೋಳ ಭಾಗದಲ್ಲಿ ೩೮೦ ಸ್ಥಳಗಳು ಸೇರಿ ಬಾಗಲಕೋಟೆ ಜಿಲ್ಲೆಯಲ್ಲಿ ಅಂದಾಜು ೨ ಸಾವಿರಕ್ಕೂ ಸ್ಥಳಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಸ್ಥಾಪನೆ ಮಾಡಿ ವಿಸರ್ಜಿಸಲಾಗುತ್ತದೆ.

ಪ್ರತಿ ಮನೆಯಲ್ಲಿ ಮೂರ್ತಿ ಸ್ಥಾಪನೆ ಮಾಡಿ ಗಣೇಶ ಹಬ್ಬ ಆಚರಿಸುವುದು ವಾಡಿಕೆ. ಮೂರ್ತಿಗಳ ಬುಕ್ಕಿಂಗ್ ಕಾರ್ಯ ಶುರುವಾಗಿದೆ. ಬಾಗಲಕೋಟೆ ನಗರದ ಒಂದರಲ್ಲಿ ಪ್ರತಿ ವರ್ಷ ಅಂದಾಜು ೨೦ ಸಾವಿರ ಮೂರ್ತಿಗಳು ಮಾರಾಟವಾಗುತ್ತವೆ. ಮೂರ್ತಿ ತಯಾರಕರು, ಮಾರಾಟಗಾರರು ಭರ್ಜರಿ ವ್ಯಾಪಾರ ವಹಿವಾಟು ಆಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net