ಅದ್ದೂರಿ, ಅರ್ಥಪೂರ್ಣ ರಾಜ್ಯೋತ್ಸವಕ್ಕೆ ನಿರ್ಧಾರ

22 yelandur 02
Published on

ಯಳಂದೂರು: ಪಟ್ಟಣದಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಧ್ವಜಾರೋಹಣ ಮತ್ತು ವೇದಿಕೆ ಕಾರ್ಯಕ್ರಮ ನಡೆಯಲಿದೆ. ವಿವಿಧ ಇಲಾಖೆಗಳು ಮತ್ತು ಶಾಲಾ-ಕಾಲೇಜುಗಳ ವತಿಯಿಂದ ಸ್ತಬ್ಧಚಿತ್ರಗಳು ಬರಲಿದ್ದು, ಕಲಾತಂಡಗಳೊಂದಿಗೆ ಪಟ್ಟಣದಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಬೇಕು.ಪುರುಷರು ಬಿಳಿ ಪಂಚೆ-ಅಂಗಿಯೊಂದಿಗೆ ಹಳದಿ-ಕೆಂಪು ಶಾಲು ಮತ್ತು ಮಹಿಳೆಯರು ಸೀರೆ, ಹಳದಿ-ಕೆಂಪು ಶಾಲು ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಲಾಯಿತು.

ಪಟ್ಟಣದ ಎಲ್ಲಾ ಇಲಾಖೆಗಳ ಕಚೇರಿಯನ್ನು ತಳಿರು ತೋರಣಗಳಿಂದ ಸಿಂಗರಿಸುವುದರ ಜತೆಗೆ ವಿದ್ಯುತ್ ದೀಪಾಲಂಕಾರ ಮಾಡಬೇಕು. ಜತೆಗೆ ಕಡ್ಡಾಯವಾಗಿ ಕನ್ನಡ ಬಾವುಟ ಹಾರಿಸಬೇಕು. ಬಳೆಮಂಟಪ, ಜಹಗೀರ್‌ದಾರ್ ಬಂಗಲೆ, ಷಡಕ್ಷರದೇವ ಗದ್ದುಗೆ, ಅಂಬೇಡ್ಕರ್ ಪ್ರತಿಮೆ ಮುಂತಾದ ಸ್ಥಳಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡುವಂತೆ ಕನ್ನಡಪರ ಸಂಘಟನೆಗಳ ಮುಖಂಡರು ಮನವಿ ಮಾಡಿದರು.

ಎಸ್ಸೆಸ್ಸೆಲ್ಸಿ ಮತ್ತ್ತು ಪಿ.ಯು.ಸಿಯ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲು ಮತ್ತು ಪೂರ್ವಭಾವಿ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ, ಸದಸ್ಯರಾದ ಮಹೇಶ್, ರಂಗನಾಥ್, ನಾಮನಿರ್ದೇಶಿತ ಸದಸ್ಯ ಬಳೆಪೇಟೆ ಲಿಂಗರಾಜಮೂರ್ತಿ, ಮುಖ್ಯಾಧಿಕಾರಿ ಮಹೇಶ್ ಕುಮಾರ್, ಮುಖಂಡರಾದ ವೀರಭದ್ರಪ್ಪ, ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ, ಕರವೇ ಜಿಲ್ಲಾ ಉಪಾಧ್ಯಕ್ಷ ವೈ.ಕೆ.ಮೋಳೆ ನಾಗರಾಜು, ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ರೇವಣ್ಣ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net