ಅತ್ಯುತ್ತಮ ಪೊಲೀಸ್ ಸಿಬ್ಬಂದಿಗೆ ಬಹುಮಾನ

3-RNR-01
Published on

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

ಪೊಲೀಸರಲ್ಲಿ ಕಾರ್ಯಕ್ಷಮತೆ ಹಾಗೂ ಆತ್ಮಸ್ಥೈರ್ಯ ಹೆಚ್ಚಿಸುವ ಸಲುವಾಗಿ ಅತ್ಯುತ್ತಮ ಕಾರ್ಯನಿರ್ವಹಿಸಿದ ಸಿಬ್ಬಂದಿಗೆ ತಿಂಗಳಿಗೊಮ್ಮೆ ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಲು ಪೊಲೀಸ್ ಇಲಾಖೆ ಮುಂದಾಗಿದೆ.

ಈ ಕುರಿತು ಡಿಜಿಪಿ ಪ್ರವೀಣ್ ಸೂದ್, ಎಡಿಜಿಪಿ ಅಲೋಕಕುಮಾರ 2 ತಿಂಗಳ ಹಿಂದೆ ಯೋಜನೆ ರೂಪಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡಿ ಬಹುಮಾನಕ್ಕೆ ಆಯ್ಕೆಯಾದ ಪೊಲೀಸ್ ಸಿಬ್ಬಂದಿಯ ಹೆಸರು ಹಾಗೂ ಭಾವಚಿತ್ರವನ್ನು ಆಯಾ ಠಾಣೆಯ ನಾಮಫಲಕದಲ್ಲಿ ಅಳವಡಿಸಿ 1 ತಿಂಗಳು ಅವರಿಗೆ ಗೌರವ ಸೂಚಿಸಲಾಗುತ್ತಿದೆ. ಇದರಿಂದ ಇಡೀ ಪೊಲೀಸ್ ಠಾಣೆಯ ಸಿಬ್ಬಂದಿಯಲ್ಲಿ ಕಾರ್ಯಕ್ಷಮತೆಯ ಉತ್ಸಾಹ ಬರಲಿದೆ ಎಂಬುದು ಡಿಜಿಪಿ, ಎಡಿಜಿಪಿಯವರ ಅಭಿಪ್ರಾಯವಾಗಿದೆ.

ಆಯ್ಕೆ ಹೇಗೆ...?: ಒಂದು ತಿಂಗಳಲ್ಲಿ ಅಪರಾಧ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಮುಂಚೂಣಿಯಲ್ಲಿರುವ ಸಿಬ್ಬಂದಿ, ಸಮನ್ಸ್ ಜಾರಿ ಮಾಡುವಲ್ಲಿ ಸಂಪೂರ್ಣ ಯಶಸ್ವಿಯಾಗುವವರು, ಕಳ್ಳತನ ಪ್ರಕರಣದಲ್ಲಿ ಸಂಪೂರ್ಣ ವಸ್ತುಗಳನ್ನು ಜಪ್ತಿ ಮಾಡಿ ಠಾಣೆಗೆ ಒಪ್ಪಿಸುವವರು, ಪೊಲೀಸ್ ಐಟಿಯನ್ನು ಸರಿಯಾಗಿ ನಿರ್ವಹಣೆ ಮಾಡುವವರು. ತನಿಖಾ ಸಹಾಯಕರಾಗಿ ಉತ್ತಮವಾಗಿ ಕೆಲಸ ಮಾಡುವವವರು, ಅವಧಿಯೊಳಗೆ ಚಾರ್ಜ್ ಶೀಟ್ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವವರು, ಕೋರ್ಟ್​ನ ಪೆಂಡಿಂಗ್ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವವರು, ಅತ್ಯುತ್ತಮವಾಗಿ ಎಸ್​ಎಚ್​ಒ ಕಾರ್ಯ ನಿರ್ವಹಣೆ ಮಾಡುವವರು, ನಾಪತ್ತೆ ಪ್ರಕರಣಗಳನ್ನು ಆದಷ್ಟು ಬೇಗ ಪತ್ತೆ ಮಾಡುವವರು ಸೇರಿ ಇಲಾಖೆಯಲ್ಲಿ ಎಲ್ಲ ರೀತಿಯ ಕೆಲಸ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ಮಾಡುವವರನ್ನು ತಿಂಗಳ ಅತ್ಯುತ್ತಮ ಕೆಲಸಗಾರ ಎಂದು ಆಯ್ಕೆ ಮಾಡಲಾಗುತ್ತದೆ.

ಅವರ ಕೆಲಸ ನೋಡಿ ಆಯಾ ಠಾಣಾಧಿಕಾರಿಗಳು ಆಯ್ಕೆ ಮಾಡುತ್ತಾರೆ. ಠಾಣಾ ವ್ಯಾಪ್ತಿಯಲ್ಲಿ ಆಯ್ಕೆಯಾದ ಸಿಬ್ಬಂದಿಯ ಮಾಹಿತಿಯನ್ನು ಎಸ್​ಪಿ ಅವರಿಗೆ ಕಳುಹಿಸಲಾಗುತ್ತದೆ. ಎಸ್​ಪಿ ಎಲ್ಲ ಠಾಣೆಯ ಅತ್ಯುತ್ತಮ ಕಾರ್ಯನಿರ್ವಹಣೆಯ ಸಿಬ್ಬಂದಿ ಮಾಹಿತಿ ಆಧರಿಸಿ ಒಬ್ಬರನ್ನು ಆಯ್ಕೆ ಮಾಡಿ ಅವರಿಗೆ ಜಿಲ್ಲಾ ಮಟ್ಟದ ತಿಂಗಳ ಅತ್ಯುತ್ತಮ ಕಾರ್ಯನಿರ್ವಹಿಸಿದ ಸಿಬ್ಬಂದಿ ಪಟ್ಟ ನೀಡಲಾಗುತ್ತದೆ.

ಹೆಚ್ಚಿದ ಕಾರ್ಯಕ್ಷಮತೆ: ಪೊಲೀಸ್ ಸಿಬ್ಬಂದಿ ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಪ್ರೇರಣೆ ನೀಡುವ ಉದ್ದೇಶದಿಂದ ಡಿಜಿಪಿ ಜಾರಿಗೊಳಿಸಿದ ಯೋಜನೆಯಿಂದ ಠಾಣೆಗಳಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಸಿಬ್ಬಂದಿಗೆ ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡುವುದರಿಂದ ಅವರ ಸರ್ವೀಸ್ ಹಿಸ್ಟ್ರಿ ಕೂಡ ಚೆನ್ನಾಗಿ ಆಗುತ್ತದೆ. ಇದರಿಂದ ಮುಂದೆ ಮುಖ್ಯಮಂತ್ರಿ ಪದಕ ಪಡೆಯಲು, ಮುಂಬಡ್ತಿ ಹೊಂದಲು ಅನುಕೂಲವಾಗಲಿದೆ ಎಂಬುದು ಠಾಣಾಧಿಕಾರಿಗಳ ಅಭಿಪ್ರಾಯ.

ಪೊಲೀಸ್ ಸಿಬ್ಬಂದಿ ಮಾಡುವ ಕೆಲಸಕ್ಕೆ ಗೌರವ ನೀಡಬೇಕು. ಅವರಲ್ಲಿ ಆತ್ಮಸ್ಥೈರ್ಯ, ಉತ್ಸಾಹ ತುಂಬಬೇಕು ಎಂಬ ಉದ್ದೇಶದಿಂದ ಮೇಲಧಿಕಾರಿಗಳು ತಿಂಗಳಿಗೊಬ್ಬ ಅತ್ಯು ತ್ತಮ ಕಾರ್ಯನಿರ್ವಹಿಸಿದ ಸಿಬ್ಬಂದಿ ಆಯ್ಕೆಗೆ ಆದೇಶಿಸಿದ್ದಾರೆ. ಸಿಬ್ಬಂದಿಯಲ್ಲಿಯೆ ಪೈಪೋಟಿ ಬೆಳೆದು ಎಲ್ಲರೂ ಉತ್ತಮ ರೀತಿಯಲ್ಲಿ ಕೆಲಸ ಮಾಡಲಿದ್ದಾರೆ. ಹನುಮಂತರಾಯ ಎಸ್ಪಿ ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net