ಅತ್ಯಾಧುನಿಕ ದಾಸೋಹ ಭವನ ನಿರ್ಮಾಣಕ್ಕೆ ಕ್ರಮವಹಿಸಿ

16 HANUR 3
Published on

ಹನೂರು: ಮಲೆಮಹದೇಶ್ವರ ಬೆಟ್ಟದಲ್ಲಿ ಅತ್ಯಾಧುನಿಕ ದಾಸೋಹ ಭವನ ನಿರ್ಮಾಣ ಹಾಗೂಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮಾಸ್ಟರ್ ಪ್ಲಾನ್ ಆವರಣದ ಅಭಿವೃದ್ಧಿಗೆ ಅಗತ್ಯ ಕ್ರಮವಹಿಸುವಂತೆ ಜಿಲ್ಲಾ ಉಸ್ತುವಾರಿ ಹಾಗೂ ರೇಷ್ಮೆ ಮತ್ತು ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ಬೆಂಗಳೂರಿನ ವಿಕಾಸಸೌಧದಲ್ಲಿ ಬುಧವಾರ ಮ.ಬೆಟ್ಟದಲ್ಲಿ ಮಾಸ್ಟರ್ ಪ್ಲಾನ್ ಆವರಣದ ಅಭಿವೃದ್ಧಿ ಹಾಗೂ ಸುಸಜ್ಜಿತ ದಾಸೋಹ ನಿರ್ಮಾಣ ಮಾಡುವ ಸಂಬಂಧ ಆಯೋಜಿಸಿದ್ದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಹಾಗೂ ಜಾತ್ರೆ ವೇಳೆ ಆಗಮಿಸುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ದಾಸೋಹ ಭವನದಲ್ಲಿ ನೀಡುವ ಪ್ರಸಾದವನ್ನು ಮಾದಪ್ಪನ ಪ್ರಸಾದ ಎಂದು ಭಾವಿಸಿ ಲಕ್ಷಾಂತರ ಭಕ್ತರು ಭಕ್ತಿಭಾವದಿಂದ ಸ್ವೀಕರಿಸುತ್ತಾರೆ. ಆದರೆ, ದಾಸೋಹ ಭವನವು ಹಳೆಯದಾಗಿದ್ದು ಸುಮಾರು 1,500 ಭಕ್ತರಷ್ಟೇ ಒಮ್ಮೆಗೆ ಕುಳಿತು ಪ್ರಸಾದ ಸ್ವೀಕರಿಸಬಹುದಾಗಿದೆ. ಭಕ್ತರು ಸರದಿ ಸಾಲಿನಲ್ಲಿ ತೆರಳಬೇಕಿದೆ. ಇದರಿಂದ ಭಕ್ತರು ಸುಗಮವಾಗಿ ಪ್ರಸಾದ ಸ್ವೀಕರಿಸಲು ತೊಡಕಾಗಿ ಪರಿಣಮಿಸಿದೆ. ಹಾಗಾಗಿ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 3 ಎಕರೆ ಪ್ರದೇಶದಲ್ಲಿ ಅಂದಾಜು 90 ಕೋಟಿ ರೂ.ವೆಚ್ಚದಲ್ಲಿ ಅತ್ಯಾಧುನಿಕ ದಾಸೋಹ ಭವನವನ್ನು ನಿರ್ಮಿಸಲು ಪ್ರಾಧಿಕಾರದ ಸಭೆಯಲ್ಲಿ ಉದ್ಧೇಶಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿದ್ದರು. ಜತೆಗೆ ಮಾಸ್ಟರ್ ಪ್ಲಾನ್ ಆವರಣವನ್ನು ಅಭಿವೃದ್ಧಿ ಪಡಿಸಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದಾಗಿ ನಿರ್ಧರಿಸಲಾಗಿತ್ತು.

ಈ ಸಂಬಂಧ ಬುಧವಾರ ವಿಕಾಸಸೌಧದಲ್ಲಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಸಚಿವ ಕೆ. ವೆಂಕಟೇಶ್, ಶಾಸಕ ಎಂ.ಆರ್ ಮಂಜುನಾಥ್, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಜಿಪಂ ಸಿಇಒ ಮೋನಾರೋತ್, ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು, ಎಡಿಎಲ್‌ಆರ್ ವಿದ್ಯಾರಾಣಿ, ಪಿಡಬ್ಲ್ಯುಡಿ ಹಾಗೂ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಈ ಸಂಬಂಧ ಕ್ರಿಯಾಯೋಜನೆ ಹಾಗೂ ನೀಲಿನಕ್ಷೆ ತಯಾರಿಸಿ ದಾಸೋಹ ಭವನದ ನಿರ್ಮಾಣ ಕಾಮಗಾರಿ ಆರಂಭಿಸಬೇಕು. ಮಾಸ್ಟರ್ ಪ್ಲಾನ್ ಆವರಣದಲ್ಲಿ ಸರ್ವೇ ಕಾರ್ಯ ನಡೆಸಿ ಗಡಿ ಗುರುತಿಸಿ ಅಭಿವೃದ್ಧಿಗೆ ಅಗತ್ಯ ಕ್ರಮವಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಮ.ಬೆಟ್ಟದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸ್ಥಾಪಿಸುವ ಸಂಬಂಧ ಅಗತ್ಯ ಮಾಹಿತಿ ಪಡೆದು ಚರ್ಚಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net