

ಹಾವೇರಿ: ಉದ್ಯೋಗ ಖಾತ್ರಿ ಯೋಜನೆಯಡಿ ಸೆಪ್ಟೆಂಬರ್ನಲ್ಲಿ ಜಿಲ್ಲೆಯ 223 ಗ್ರಾಪಂಗಳಲ್ಲಿ ಏಕಕಾಲಕ್ಕೆ ಪ್ರತಿಮನೆಗೆ ಬಚ್ಚಲು ಗುಂಡಿ, ಪ್ರತಿಮನೆ ಮತ್ತು ಸಮುದಾಯಗಳಿಗೆ ಪೌಷ್ಟಿಕ ತೋಟ, ಸ್ತ್ರೀಶಕ್ತಿ ಗುಂಪುಗಳಿಗೆ ಅಣಬೆ ಬೇಸಾಯ ಶೆಡ್ ನಿರ್ವಿುಸಿಕೊಡುವ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ರಮೇಶ ದೇಸಾಯಿ ತಿಳಿಸಿದ್ದಾರೆ.
ಬಚ್ಚಲು ಗುಂಡಿ: ಹಳ್ಳಿಗರ ಆರೋಗ್ಯ, ಸ್ವಾಭಿಮಾನಕ್ಕಾಗಿ ಅವಶ್ಯವಿರುವ ಸೋಕ್ ಪಿಟ್ (ಬಚ್ಚಲು ಗುಂಡಿ) ಕಾಮಗಾರಿಯನ್ನು 17 ಸಾವಿರ ರೂ. ವೆಚ್ಚದಲ್ಲಿ ನಿರ್ವಿು ಸಲು ಉದ್ದೇಶಿಸಲಾಗಿದೆ. ಕೊಚ್ಚೆಯ ನೀರು ಎಲ್ಲೆಂದರಲ್ಲಿ ಹರಿದು ಅನಾರೋಗ್ಯ ತರುವುದನ್ನು ತಡೆದು ಗ್ರಾಮದಲ್ಲಿ ನೈರ್ಮಲ್ಯ ಕಾಪಾಡುವುದು, ಸೊಳ್ಳೆ ದೂರ ಮಾಡುವುದು, ಈ ನೀರಿನಿಂದ ಮನೆ ಸುತ್ತ ಸಸಿಗಳನ್ನು ಬೆಳೆಸಿ ನೀರುಣಿಸಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಪೌಷ್ಟಿಕ ತೋಟ: ನಮ್ಮ ಆರೋಗ್ಯಕ್ಕಾಗಿ ಬೇಕು ಪೌಷ್ಟಿಕ ತೋಟ ಅಭಿಯಾನದಡಿ ಹಳ್ಳಿಗಳ ಪ್ರತಿಮನೆಗೆ 1 ಗುಂಟೆ ಜಾಗದಲ್ಲಿ ಪೌಷ್ಟಿಕ ತೋಟ ನಿರ್ವಿುಸಿಕೊಳ್ಳಲು ನರೇಗಾದಡಿ ಅಂದಾಜು 2400 ರೂ. ಮೊತ್ತದ ಕಾಮಗಾರಿ ಉಚಿತವಾಗಿ ಕೈಗೊಳ್ಳಲಾಗುವುದು. ವೈಯಕ್ತಿಕವಾಗಿ ಮನೆಗಳಲ್ಲಿ ಕೈತೋಟ ನಿರ್ವಿುಸಿಕೊಳ್ಳಬಹುದು ಅಥವಾ ಶಾಲೆ, ಅಂಗನವಾಡಿ, ಹಾಸ್ಟೆಲ್, ವಸತಿ ಶಾಲೆಗಳಲ್ಲಿ ‘ಉತ್ತಮ ಆರೋಗ್ಯಕ್ಕಾಗಿ’ ಎಂಬ ಘೊಷವಾಕ್ಯದೊಂದಿಗೆ ಸಮುದಾಯ ಪೌಷ್ಟಿಕ ತೋಟ ನಿರ್ವಣಕ್ಕೆ ನೆರವು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಅಣಬೆ ಬೇಸಾಯ ಶೆಡ್: ಗ್ರಾಮಗಳ ಸ್ತ್ರೀಶಕ್ತಿ ಗುಂಪುಗಳಿಗೆ ನಿರಂತರ ಆದಾಯ, ಉದ್ಯೋಗ ಸೃಷ್ಟಿಸಲು ಅಂದಾಜು 95 ಸಾವಿರ ರೂ. ವೆಚ್ಚದಲ್ಲಿ ಅಣಬೆ ಬೆಸಾಯ ಶೆಡ್ ನಿರ್ವಿುಸಿಕೊಡಲು ಉದ್ದೇಶಿಸಲಾಗಿದೆ. ಪ್ರತಿ ಕೆಜಿ ಅಣಬೆಗೆ 150 ರೂ. ದಿಂದ 180 ರೂ.ವರೆಗೆ ಆದಾಯ ಗಳಿಸಬಹುದು. ಅಣಬೆ ಶೆಡ್ನಲ್ಲಿ ಪ್ರತಿ ತಿಂಗಳು 100 ರಿಂದ 125 ಕೆಜಿ ಅಣಬೆ ಉತ್ಪಾದಿಸಬಹುದು. ಅಣಬೆ ತಿನ್ನುವುದರಿಂದ ಪ್ರೋಟಿನ್, ಪೈಬರ್ ಹೆಚ್ಚು ಪ್ರಮಾಣದಲ್ಲಿ ದೊರೆಯುತ್ತದೆ. ಬಿ ಜೀವಸತ್ವಗಳು, ಸೆಲೆನಿಯಮ್ ಎಂಬ ಶಕ್ತಿಶಾಲಿ ಉತ್ಕರ್ಷಣ ನಿರೋಧಕವೂ ದೊರಕುತ್ತದೆ ಎಂದು ತಿಳಿಸಿದ್ದಾರೆ.
ಈ ಯೋಜನೆಗಳ ಸದುಪಯೋಗ ಪಡೆಯಲು ಆಸಕ್ತರು ಆಯಾ ಗ್ರಾಪಂಗಳನ್ನು ಸಂರ್ಪಸಬಹುದು. ನರೇಗಾದಡಿ ಉದ್ಯೋಗ ಬಯಸುವ ಕೂಲಿ ಕಾರ್ವಿುಕರು ಕೆಲಸ ಮತ್ತು ಕಾಮಗಾರಿ ಪಡೆಯಲು ಕಾಯಕ ಮಿತ್ರ ಮೊಬೈಲ್ ಆಪ್ ಬಳಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಮಾಹಿತಿಗಾಗಿ ಉಚಿತ ಸಹಾಯವಾಣಿ 1800-4258-666ಕ್ಕೆ ಕರೆ ಮಾಡಬಹುದು ಎಂದು ರಮೇಶ ದೇಸಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮಗಾರಿ ಅನುಷ್ಠಾನ ಕಾರ್ಯಕ್ರಮ: ಶಿಗ್ಗಾಂವಿ ತಾಲೂಕಿನ ಶಿಡ್ಲಾಪುರ ಗ್ರಾಮದ ವಾಲ್ಮೀಕಿ ಸಭಾಭವನದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವಿಶೇಷ ಅಭಿಯಾನ ಮತ್ತು ಕಾಮಗಾರಿಗಳ ಅನುಷ್ಠಾನ ಕಾರ್ಯಕ್ರಮ ಮಂಗಳವಾರ ಜರುಗಿತು.
ತಾ.ಪಂ. ಇಒ ಪ್ರಶಾಂತ ತುರಕಾಣಿ ಮಾತನಾಡಿ, ಗ್ರಾಮೀಣ ಭಾಗದ ಪ್ರತಿ ಮನೆಗೆ ಬಚ್ಚಲ ಗುಂಡಿ (ಸೋಕ್ ಪಿಟ್) ನಿರ್ವಿುಸಿಕೊಳ್ಳುವುದರಿಂದ ಗ್ರಾಮವನ್ನು ಅನೈರ್ಮಲ್ಯ ಮುಕ್ತವಾಗಿಸುವ ಜತೆಗೆ ಅನಾರೋಗ್ಯ ತಡೆಯಬಹುದು ಎಂದರು.
ತಾಲೂಕು ನರೇಗಾ ಯೋಜನೆ ಸಹಾಯಕ ನಿರ್ದೇಶಕ ಎಸ್.ಬಿ. ಸಂದೀಪ ಮಾತನಾಡಿದರು. ಇದೇ ವೇಳೆ ಕಾಮಗಾರಿ ಆದೇಶ ಪತ್ರ ವಿತರಿಸಲಾಯಿತು. ಹೋತನಹಳ್ಳಿ ಸಿಂದಗಿ ಶಾಖಾ ಮಠದ ಶಂಭುಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಹೋತನಹಳ್ಳಿ ಪಿಡಿಒ ಶಾಂತಿನಾಥ ನ್ಯಾಮಗೌಡ್ರ, ಬಿ.ಎನ್. ರಾಜೇಶ್ವರಿ, ನಿಂಗಪ್ಪ ಕೊಳಲ, ಬಸನಗೌಡ ಪಾಟೀಲ, ಮುತ್ತಪ್ಪ ಕಲಕಟ್ಟಿ, ಬಸಪ್ಪ ಸಣ್ಣಮನಿ, ರವಿ ಸುಂಕದ, ಉಮೇಶ ಯಲಗಚ್ಚ, ಮಾರುತಿ ಸಣ್ಣಮನಿ, ಮಂಜು ಬಡಪ್ಪನವರ, ಬಸವರಾಜ ದೊಡಮನಿ ಉಪಸ್ಥಿತರಿದ್ದರು.