ಗುಂಡ್ಲುಪೇಟೆ: ಪುರಸಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿ ಅಧಿಕಾರ ಪಡೆದ ಇಬ್ಬರು ಹಾಗೂ ಬೆಂಬಲಿಸಿದ ಬಿಜೆಪಿಯ ಮೂವರು ಸದಸ್ಯರನ್ನು ಪಕ್ಷಾಂತರ ಕಾಯ್ದೆ ಅನ್ವಯ ಸದಸ್ಯತ್ವ ರದ್ದು ಮಾಡಲಾಗಿದೆ.
ಕಾಂಗ್ರೆಸ್ ಸೇರಿ ಅಧ್ಯಕ್ಷರಾಗಿದ್ದ ಜಿ.ಎಸ್.ಕಿರಣ, ಉಪಾಧ್ಯಕ್ಷೆ ಹೀನಾ ಕೌಸರ್, ಸದಸ್ಯರಾದ ಎನ್.ರಮೇಶ್, ರಾಣಿ ಲಕ್ಷ್ಮೀದೇವಿ ಹಾಗೂ ವೀಣಾ ಮಂಜುನಾಥ್ ಅವರ ಸದಸ್ಯತ್ವ ರದ್ದುಗೊಳಿಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶ ಮಾಡಿದ್ದಾರೆ.
2024ರ ಸೆ.4ರಂದು ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ವಿಪ್ ನೀಡಿದ್ದರೂ ಲೆಕ್ಕಿಸದೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಕಿರಣ್ ಹಾಗೂ ಹೀನಾ ಕೌಸರ್ ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದರು. ಉಳಿದ ಮೂವರು ಬಿಜೆಪಿಯಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕುಮಾರ್ ಅವರಿಗೆ ಮತ ನೀಡದೆ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣರಾದರು.
ಈ ಹಿನ್ನೆಲೆಯಲ್ಲಿ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಪಿ.ಗಿರೀಶ್ ಮತ್ತು ಪರಾಜಿತ ಅಭ್ಯರ್ಥಿ ಕುಮಾರ್ ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಐವರು ಸದಸ್ಯರ ವಿರುದ್ಧ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ ಅಧಿನಿಯಮ 1087ರ ಅನ್ವಯ ಸದಸ್ಯತ್ವ ರದ್ದುಪಡಿಸುವಂತೆ ಪುರಸಭೆ ಮುಖ್ಯಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳು ಜ.21ರಂದು ಕರೆದ ಅಂತಿಮ ವಿಚಾರಣೆಗೆ ಈ ಐವರು ಸದಸ್ಯರು ಗೈರಾಗಿದ್ದರು. ವಾದಿಗಳ ಪರ ಎಂ.ಎಸ್.ಮರಿಯಾದಾಸ್ ಪ್ರಬಲ ವಾದ ಮಂಡಿಸಿದ ಪರಿಣಾಮ ಸದಸ್ಯತ್ವ ರದ್ದುಗೊಳಿಸಿ ಡಿಸಿ ಆದೇಶ ಮಾಡಿದ್ದಾರೆ.
23 ಸದಸ್ಯರ ಆಡಳಿತ ಮಂಡಳಿಯಲ್ಲಿ ಬಿಜೆಪಿ 14, ಕಾಂಗ್ರೆಸ್ 8, ಎಸ್‌ಡಿಪಿಐ ಹಾಗೂ ಒಂದು ಪಕ್ಷೇತರ ಸದಸ್ಯರನ್ನು ಹೊಂದಿತ್ತು. ಮೊದಲ ಅವಧಿಯಲ್ಲಿ ಬಿಜೆಪಿ ಆಡಳಿತವಿದ್ದರೂ ಐವರು ಬಿಜೆಪಿ ಸದಸ್ಯರನ್ನು ಸೆಳೆದ ಕಾಂಗ್ರೆಸ್, ಇಬ್ಬರು ಪಕ್ಷೇತರರು, ಶಾಸಕ ಹಾಗೂ ಸಂಸದರ ಮತ ಸೇರಿ 17 ಮತಗಳಿಂದ ಅಧಿಕಾರ ಹಿಡಿದಿತ್ತು. ಆದರೆ ಡಿ.26ರಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಬ್ಬರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದೆ. 5 ಸದಸ್ಯರ ಅನರ್ಹತೆಯಾದರೂ ಬಹುಮತಕ್ಕೆ ಯಾವುದೇ ಧಕ್ಕೆಯಾಗದಿರುವುದರಿಂದ ಆಡಳಿತ ನಡೆಸಲು ತೊಂದರೆಯಾಗಿಲ್ಲ.