

ಬೆಳಗಾವಿ: ‘ಸಮಾಜದಲ್ಲಿರುವ ಲಿಂಗ ತಾರತಮ್ಯ ಹೋಗಲಾಡಿಸಿ, ಸಮಸಮಾಜ ನಿರ್ಮಿಸಲು ಪ್ರಯತ್ನಿಸಬೇಕಾಗಿದೆ. ಸೀಯೊಬ್ಬಳು ಎಲ್ಲ ಅಡೆತಡೆ ಮುರಿದು ಮುಂದೆ ಸಾಗಿದಾಗ ಮಾತ್ರ ಯಶಸ್ಸು ದೊರೆಯುತ್ತದೆ’ ಎಂದು ಏಷ್ಯನ್ ಪ್ಯಾರಾ ಗೇಮ್ಸ್ ರನ್ನರ್ ಅಪ್ ಶಾಲಿನಿ ಸರಸ್ವತಿ ಹೇಳಿದರು.
ನಗರದ ಕೆಎಲ್‌ಇ ಶತಮಾನೋತ್ಸವ ಸ್ಮಾರಕ ಸಭಾಭವನದಲ್ಲಿ ಕೆಎಲ್‌ಇ ಸಂಸ್ಥೆಯ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಮಹಿಳೆಯರಿಗೆ ಆತ್ಮವಿಶ್ವಾಸ ಹಾಗೂ ಸಮಾನ ಅವಕಾಶ ಸೃಷ್ಟಿಸುವ ಅಗತ್ಯವಿದೆ.
ಪ್ರಸ್ತುತ ಸಮಾಜದಲ್ಲಿ ಲಿಂಗಬೇಧ ಅಧಿಕಗೊಳ್ಳುತ್ತಿದೆ. ಅದನ್ನು ತಪ್ಪಿಸಬೇಕಾದರೆ ಸುಶಿಕ್ಷಿತ ಸಮಾಜ ನಿರ್ಮಾಣ ಮಾಡಬೇಕು. ಮಹಿಳೆಯರ ಆರೋಗ್ಯ, ಆರ್ಥಿಕತೆ ಸೇರಿದಂತೆ ಸಾಮಾಜಿಕ ಸ್ಥಾನಮಾನ ಹೆಚ್ಚಿಸುವ ನಿಟ್ಟಿನಲ್ಲಿ ಕೆಎಲ್‌ಇ ಸಂಸ್ಥೆಯ ಸ್ವಶಕ್ತಿ ಮಹಿಳಾ ಸಬಲೀಕರಣ ಕೋಶ ಮಾಡುತ್ತಿರುವ ಕಾರ್ಯಗಳು ಮಾದರಿಯಾಗಿವೆ’ ಎಂದರು. ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡಿದ್ದ ಚಿತ್ರಕಲೆ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು.
ಕೆಎಲ್‌ಇ-ಸ್ವಶಕ್ತಿ ಸಬಲೀಕರಣ ಕೋಶ: ‘ಯತ್ರ ನಾರ್ಯಸ್ತು ಪೂಜ್ಯಂತೇ, ರಮಂತೇ ತತ್ರ ದೇವತಾಃ’. ಮಹಿಳೆಯರನ್ನು ಎಲ್ಲಿ ಗೌರವಿಸಲಾಗುತ್ತದೆಯೋ ಅಲ್ಲಿ ದೈವತ್ವ ಅರಳುತ್ತದೆ. ಅವರು ಎಲ್ಲಿ ಅವಮಾನಿಸಲ್ಪಡುತ್ತಾರೆಯೋ ಅಲ್ಲಿ ವಿಲತೆ ಇರುತ್ತದೆ ಎನ್ನುವುದು ಲಿಂಗ ಸಮಾನತೆ ಮತ್ತು ಸಬಲೀಕರಣದ ಮಹತ್ವವನ್ನು ಪ್ರತಿಬಿಂಬಿಸುತ್ತದೆ. ಇದೇ ಮಾತಿನಂತೆ ಕೆಎಲ್ಇ ಸಂಸ್ಥೆಯು 2007ರ ಮಾ.8ರಂದು ಸ್ಥಾಪಿಸಿದ ‘ಸ್ವಶಕ್ತಿ ಸಬಲೀಕರಣ ಕೋಶ’ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವುದು ಹೆಮ್ಮೆ ಸಂಗತಿ. ಸ್ವಶಕ್ತಿ ಸಬಲೀಕರಣ ಕೋಶ ಮಹಿಳೆಯರ ಆರೋಗ್ಯ, ಆರ್ಥಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಬದಲಾವಣೆಯಲ್ಲಿ ವಿವಿಧ ಯೋಜನೆ ಅಳವಡಿಸಿಕೊಂಡಿದ್ದು, ಸ್ತನ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಮಹಿಳೆಯರ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ತಪಾಸಣೆ ಮತ್ತು ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಉದ್ಯಮಶೀಲ ಕೌಶಲ ತರಬೇತಿ ಮೂಲಕ ಮಹಿಳೆಯರನ್ನು ಆರ್ಥಿಕವಾಗಿಯೂ ಸಬಲರನ್ನಾಗಿಸುತ್ತಿರುವ ಮಾದರಿ ಸಂಸ್ಥೆಯಾಗಿ ಎಲ್ಲರ ಗಮನ ಸೆಳೆಯುತ್ತಿದೆ.
ಅನನ್ಯ ಸಾಧಕಿ ಶಾಲಿನಿ: ಭಾರತದ ಪ್ರಥಮ ಮಹಿಳಾ ಬ್ಲೇಡ್ ರನ್ನರ್ ಆಗಿರುವ ಶಾಲಿನಿ ಸರಸ್ವತಿ ಅತ್ಯುತ್ತಮ ಮೋಟಿವೇಶನಲ್ ಭಾಷಣಕಾರೆನಿಸಿಕೊಂಡಿದ್ದಾರೆ. 2023ರ ಏಷ್ಯನ್ ಪ್ಯಾರಾ ಗೇಮ್ಸ್ ಪ್ರತಿನಿಧಿಸುವುದರ ಜತೆಗೆ ಾಸ್ಟೆಸ್ಟ್ ವುಮೆನ್ ಆನ್ ಬ್ಲೇಡ್ಸ್ ಟಿ62 ವಿಭಾಗದಲ್ಲಿ ಏಷ್ಯನ್ ದಾಖಲೆ ಸೃಷ್ಟಿಸಿದ್ದಾರೆ.
ಭಾರತೀಯ ಮಹಿಳೆ ಎಂಥ ಕಷ್ಟಕಾಲದಲ್ಲೂ ಧೈರ್ಯವಾಗಿ ನಿಂತವಳು. ಅಂತಹ ಮಹಿಳೆಯರ ಆತ್ಮವಿಶ್ವಾಸ ವೃದ್ಧಿಸುವ ಕೆಲಸ ಮಾಡಿದರೆ ಇಡೀ ಸಮಾಜ ಇನ್ನಷ್ಟು ಸಮೃದ್ಧವಾಗಿ ಬೆಳೆಯುತ್ತದೆ. | ಡಾ.ಪ್ರೀತಿ ದೊಡವಾಡ, ಮುಖ್ಯಸಂಯೋಜಕಿ, ಕೆಎಲ್‌ಇ ಸ್ವಶಕ್ತಿ ಮಹಿಳಾ ಸಬಲೀಕರಣ ಕೋಶ