

ಬೇಲೂರು: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಗಾಳಿ, ಮಳೆಯಿಂದಾಗಿ ತಾಲೂಕಿನ ಸನ್ಯಾಸಿಹಳ್ಳಿ ಗ್ರಾಮದ ಮಲ್ಲಯ್ಯ ಎಂಬುವರ ಅಡುಗೆ ಮನೆಯ ಹಿಂಭಾಗದ ಗೋಡೆ ಇತ್ತೀಚೆಗೆ ಕುಸಿದು ಬಿದ್ದಿದೆ.
ಸನ್ಯಾಸಿಹಳ್ಳಿ ಗ್ರಾಮದ ಮಲ್ಲಯ್ಯ ಮತ್ತು ಕುಟುಂಬದವರು ರಾತ್ರಿ 7.30ರ ಸಮಯದಲ್ಲಿ ಮನೆ ಮಧ್ಯ ಭಾಗದಲ್ಲಿ ಊಟಕ್ಕೆ ಕುಳಿತ್ತಿದ್ದರು. ಈ ಸಂದರ್ಭದಲ್ಲಿ ಗಾಳಿ, ಮಳೆಗೆ ಅಡುಗೆ ಮನೆಯ ಹಿಂಭಾಗದ ಗೋಡೆ ಕುಸಿದು ಬಿದ್ದಿದೆ. ಇದರಿಂದಾಗಿ ಅಡುಗೆ ಮನೆಯಲ್ಲಿದ್ದ ಪಾತ್ರೆ ಸೇರಿದಂತೆ ಗೃಹೋಪಯೋಗಿ ವಸ್ತುಗಳು ಹಾನಿಗೀಡಾಗಿವೆ. ಅದೃಷ್ಟವಶಾತ್ ಅಡುಗೆ ಮನೆಯಲ್ಲಿ ಯಾರೂ ಇಲ್ಲದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಸ್ಥಳಕ್ಕೆ ಶಾಸಕ ಎಚ್.ಕೆ.ಸುರೇಶ್ ಹಾಗೂ ತಹಸೀಲ್ದಾರ್ ಎಂ.ಮಮತಾ ಭೇಟಿ ನೀಡಿ ಪರಿಶೀಲಿಸಿ ಸರ್ಕಾರದಿಂದ ಸಿಗುವ ಸಹಾಯಧನ ಕೊಡಿಸುವುದಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕಂದಾಯ ನಿರೀಕ್ಷಕ ಯೋಗಾನಂದ್, ಗ್ರಾಮ ಲೆಕ್ಕಿಗ ಹನುಮಂತು, ಗ್ರಾಪಂ ಪಿಡಿಒ ಸರಸ್ವತಿ ಇತರರಿದ್ದರು.