ಅಡಕೆ ಮಾರಾಟಕ್ಕೆ ತರಾತುರಿ

8sirsi2
Published on

ಶಿರಸಿ: 2020ರ ಕರೊನಾ ಲಾಕ್​ಡೌನ್​ನಿಂದ ಕಹಿ ಉಂಡ ಅಡಕೆ ಬೆಳೆಗಾರರು ಪ್ರಸಕ್ತ ವರ್ಷ ಸರ್ಕಾರ ಲಾಕ್​ಡೌನ್ ದಿನ ಘೊಷಣೆ ಮಾಡುತ್ತಿದ್ದಂತೆ ತಮ್ಮ ಫಸಲಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾರೆ. ಇದರಿಂದಾಗಿ ಅಡಕೆ ವಹಿವಾಟು ನಡೆಸುವ ಸಂಘ -ಸಂಸ್ಥೆಗಳಲ್ಲಿ ವ್ಯಾಪಾರ ಪ್ರಾಂಗಣ ಶನಿವಾರ ತುಂಬಿತ್ತು.

ಕರೊನಾ 2ನೇ ಅಲೆ ತುಂಡರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮೇ 10ರಿಂದ ಲಾಕ್​ಡೌನ್ ಘೊಷಣೆ ಮಾಡಿದೆ. ಹೀಗಾಗಿ ಬೆಳೆಗಾರರು ಆದಷ್ಟು ಬೇಗ ಅಡಕೆ ಮಾರಿಕೊಳ್ಳುವ ತರಾತುರಿ ತೋರುತ್ತಿದ್ದಾರೆ. ನಗರದ ಪ್ರಮುಖ ಅಡಕೆ ಮಾರುಕಟ್ಟೆ ಟಿಎಸ್​ಎಸ್ ಮತ್ತು ಟಿಎಂಎಸ್​ನಲ್ಲಿ ಸರಾಸರಿ ಪ್ರತಿ ದಿನದ ವಹಿವಾಟು 1100 ಚೀಲ ಅಡಕೆ ಇದ್ದರೆ, ಕಳೆದೆರಡು ದಿನಗಳಿಂದ 2100 ಚೀಲ ಪ್ರತಿ ದಿನ ಬರುತ್ತಿದೆ. ಇದರಿಂದಾಗಿ ಒತ್ತಡ ಉಂಟಾಗುತ್ತಿದ್ದು, ಅಂದು ತಂದ ಅಡಕೆಯನ್ನು ಅಂದೇ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಒಂದೆರಡು ದಿನ ಅಡಕೆಯನ್ನು ವ್ಯಾಪಾರ ಪ್ರಾಂಗಣದಲ್ಲಿಯೇ ದಾಸ್ತಾನಿಟ್ಟು ಜಾಗ ಸಿಕ್ಕಾಗ ಮಾರಾಟ ಮಾಡುವ ಅನಿವಾರ್ಯತೆ ಉಂಟಾಗಿದೆ.

ಕಳೆದ ವರ್ಷ ಈ ದಿನಗಳಲ್ಲಿ ಚಾಲಿ ಅಡಕೆಗೆ ಪ್ರತಿ ಕ್ವಿಂಟಾಲ್​ಗೆ 25ರಿಂದ 26 ಸಾವಿರ ರೂಪಾಯಿ ಇತ್ತು. ಲಾಕ್​ಡೌನ್ ಆರಂಭವಾದ ಬಳಿಕ ಮಾರುಕಟ್ಟೆ ವಹಿವಾಟು ಸ್ಥಗಿತಗೊಂಡು ರೈತರು ಕಂಗಾಲಾಗಿದ್ದರು. ಹೊರ ರಾಜ್ಯಗಳಿಗೆ ಇಲ್ಲಿಯ ಅಡಕೆ ರವಾನೆ ಸಾಧ್ಯವಾಗದಿದ್ದರೂ, ಟಿಎಸ್​ಎಸ್ ಮತ್ತು ಟಿಎಂಎಸ್​ನಂತಹ ಸಂಸ್ಥೆಗಳು ರೈತರ ಹಿತ ಕಾಯುವ ಸಲುವಾಗಿ ಸ್ವತಃ ಖರೀದಿಸಿದ್ದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಹೊರ ರಾಜ್ಯಗಳಿಂದ ಒಮ್ಮೆಲೇ ಬೇಡಿಕೆ ಬಂದು ಚಾಲಿ ಅಡಕೆ ದರ ಏರಿಕೆಯಾಗಿ ಪ್ರತಿ ಕ್ವಿಂಟಾಲ್​ಗೆ 40 ಸಾವಿರ ರೂಪಾಯಿ ದಾಟಿತ್ತು. ಆದರೆ, ಈ ಬಾರಿ ಹಂಗಾಮಿನಲ್ಲಿ 35ರಿಂದ 36 ಸಾವಿರ ರೂಪಾಯಿ ದರವಿತ್ತು. ಆದರೆ, ಕೋವಿಡ್ ಕಾರಣಕ್ಕೆ ದರ ಹಿಮ್ಮುಖವಾದರೂ ತೀರಾ ಇಳಿಕೆಯಾಗಲ್ಲ. ಆದರೆ, ಕಳೆದ ಬಾರಿ ಹೊಡೆತ ತಿಂದಿದ್ದ ಬೆಳೆಗಾರರು ಈ ಬಾರಿ ತಪ್ಪಿಸಿಕೊಳ್ಳಲು ಲಾಕ್​ಡೌನ್ ಪೂರ್ವ ಮಾರಾಟಕ್ಕೆ ಮುಂದಾಗಿದ್ದಾರೆ.

ಲಾಕ್​ಡೌನ್ ಕಾರಣಕ್ಕೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಅಡಕೆ ತರುತ್ತಿದ್ದಾರೆ. ದರ ಒಂದೇ ತರಹವಿದ್ದರೂ, ಸರಾಸರಿ ಶೇ. 40ರಷ್ಟು ಮಾರಾಟ ಮಾಡಿದರೆ ಉಳಿದಂತೆ ಶೇ. 60ರಷ್ಟು ದಾಸ್ತಾನಿಡಲು ಮೊರೆಹೋಗುತ್ತಿದ್ದಾರೆ. ಕೋವಿಡ್ ಏರುತ್ತಿರುವುದರಿಂದ ಹೊರ ರಾಜ್ಯಗಳಿಗೆ ಅಡಕೆ ಸಾಗಾಟ ಮಾಡಲು ಕಷ್ಟವಾಗುತ್ತಿದೆ. ಖರೀದಿಸಿದ ಅಡಕೆ ತಮ್ಮಲ್ಲಿಯೇ ಉಳಿದುಬಿಟ್ಟರೆ ಎಂಬ ಆತಂಕ ವ್ಯಾಪಾರಸ್ಥರಿಗೂ ಕಾಡಲಾರಂಭಿಸಿದೆ. ಹಾಗಾಗಿ ಲಾಕ್​ಡೌನ್ ನಂತರ ಅಡಕೆ ದರ ಹೆಚ್ಚುವ ಸಾಧ್ಯತೆಯಿದೆ.| ರವೀಶ ಹೆಗಡೆ- ಟಿಎಸ್​ಎಸ್ ಪ್ರಧಾನ ವ್ಯವಸ್ಥಾಪಕ

ಜೂನ್ ಅಂತ್ಯಕ್ಕೆ ದರ ಏರಿಕೆ ನಿರೀಕ್ಷೆ

ಕಳೆದ ವರ್ಷ ಕೋವಿಡ್ ಲಾಕ್​ಡೌನ್ ವೇಳೆ ಎಲ್ಲ ಬಂದರುಗಳಲ್ಲಿ, ಅಡಕೆ ಆಗಮಿಸುವ ಕಳ್ಳ ಮಾರ್ಗಗಳಲ್ಲಿ ನಿಗಾ ವಹಿಸಲಾಗಿತ್ತು. ಹೀಗಾಗಿ, ಲಾಕ್​ಡೌನ್ ಬಳಿಕ ಸ್ಥಳೀಯ ಅಡಕೆಗೆ ಉತ್ತಮ ದರ ಲಭಿಸಲಾರಂಭಿಸಿದೆ. ಅಕ್ರಮ ಆಮದು ಈಗ ಸಂಪೂರ್ಣ ನಿಂತಿದೆ. ಪಾನ್ ಮಸಾಲಾ ತಯಾರಕರು ಮಾರ್ಚ್ ಅಂತ್ಯದಲ್ಲಿ ಅಗತ್ಯ ಪ್ರಮಾಣದ ಅಡಕೆ ಖರೀದಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಚಾಲಿ ಅಡಕೆಗೆ ದರ ಕುಸಿತವಾದರೂ, ಕೋವಿಡ್ ಸ್ಥಿತಿ ಸುಧಾರಿಸಿದ ಬಳಿಕ ಒಮ್ಮೆಲೇ ಅಡಕೆಗೆ ಬೇಡಿಕೆ ಹೆಚ್ಚಲಿದ್ದು, ಜೂನ್ ಅಂತ್ಯದಲ್ಲಿ ನಿರೀಕ್ಷೆಗೂ ಮೀರಿ ದರ ಏರಿಕೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net