

ಕಲಬುರಗಿ: ಆರ್ಥಿಕ ಶಕ್ತಿ ಇಲ್ಲದ ಬಂದಿಗಳಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತವಾಗಿ ವಕೀಲರ ಸೇವೆ ಒದಗಿಸುವುದಾಗಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಶ್ರೀನಿವಾಸ ನವಲೆ ಹೇಳಿದರು.
ಶಿಕ್ಷಾ ಮತ್ತು ವಿಚಾರಣಾ ಬಂದಿಗಳಿಗೆ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿದ ಅವರು, ಜೈಲಿನ ಪ್ರತಿಯೊಬ್ಬ ಬಂದಿ ಪ್ರಾಧಿಕಾರದಿಂದ ಉಚಿತವಾಗಿ ಸಿಗುವ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು. ಪ್ರತ್ಯೇಕವಾಗಿ ಬಂದಿಗಳಿಗೋಸ್ಕರ ಪೂರ್ಣ ಪ್ರಮಾಣದ ವಕೀಲರನ್ನು ನೇಮಿಸಲಾಗುತ್ತದೆ ಎಂದರು.
ಕೇಂದ್ರ ಕಾರಾಗೃಹ ಇಲಾಖೆ ಬಂದಿಗಳ ಸುಧಾರಣೆಗೆ ಹಲವಾರು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಇದರಲ್ಲಿ ಬಂದಿಗಳು ಭಾಗವಹಿಸಿ ಕಾನೂನು ನೆರವು ಪಡೆದು ಬಿಡುಗಡೆ ಹೊಂದಿ ಉತ್ತಮ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜೈಲು ಮುಖ್ಯ ಅಧೀಕ್ಷಕಿ ಡಾ.ಅನಿತಾ ಆರ್. ಮಾತನಾಡಿ, ಪ್ರಾಧಿಕಾರದ ಸೌಲಭ್ಯ ತಮಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಒಳ್ಳೆಯ ನಡತೆಯೊಂದಿಗೆ ಉತ್ತಮ ಸಹಕಾರ ನೀಡಿದಲ್ಲಿ ಕಾನೂನಾತ್ಮಕವಾಗಿ ಲಭ್ಯ ಸೌಲಭ್ಯ ನೀಡಲಾಗುವುದು. ಆದಷ್ಟು ಬೇಗ ಇಲ್ಲಿಂದ ಬಿಡುಗಡೆ ಹೊಂದಿ ಸಮಾಜಮುಖಿ ಕೆಲಸ ನಿರ್ವಹಿಸುತ್ತ ಕುಟುಂಬದವರೊAದಿಗೆ ಉತ್ತಮ ಬದುಕು ನಡೆಸುವಂತೆ ತಿಳಿಹೇಳಿದರು.
ಕಾರಾಗೃಹದ ಸಹಾಯಕ ಅಧೀಕ್ಷಕ ಚನ್ನಪ್ಪ, ಜೈಲರ್‌ಗಳಾದ ಸುನಂದಾ ವಿ.ಆರ್., ಸಾಗರ್ ಪಾಟೀಲ್ ಇತರರಿದ್ದರು. ಪ್ರಭಾರಿ ಅಧೀಕ್ಷಕ ಬಿ.ಸುರೇಶ ಸ್ವಾಗತಿಸಿದರು. ಶಿಕ್ಷಕ ನಾಗರಾಜ ಮೂಲಗೆ ನಿರೂಪಣೆ ಮಾಡಿ ವಂದಿಸಿದರು. ಶಿಕ್ಷಾ ಬಂದಿ ರಾಮಣ್ಣ ನೀರಮಾನ್ವಿ ಪ್ರಾರ್ಥಿಸಿದರು.