ಅಗತ್ಯ ದಾಖಲೆ ಇಲ್ಲದಿದ್ದರೆ ವಾಹನ ವಶಕ್ಕೆ

1blrp5
Published on

ಬೇಲೂರು: ಪ್ಯಾಸೆಂಜರ್ ಆಟೋ ಮತ್ತು ಆಪೆ ಆಟೋ ಚಾಲಕರು ಸಾರ್ವಜನಿಕರ ಜತೆ ಸೌಜನ್ಯದಿಂದ ವರ್ತಿಸುವುದರೊಂದಿಗೆ ಕಡ್ಡಾಯವಾಗಿ ವಾಹನಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳುವಂತೆ ಬೇಲೂರು ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ ಹೇಳಿದರು.

ಪಟ್ಟಣದ ನೆಹರುನಗರದ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕ ಮತ್ತು ಮಾಲೀಕರ ಸಭೆ ನಡೆಸಿ ಮಾತನಾಡಿದ ಅವರು, ಯಾವುದೇ ದಾಖಲೆ ಇಲ್ಲದೆ ವಾಹನ ಚಲಾಯಿಸುವುದು ಅಪರಾಧವಾಗುತ್ತದೆ. ಇದಕ್ಕೆ ಕಾನೂನಿನಡಿ ಕಠಿಣ ಶಿಕ್ಷೆ ಇದೆ. ಅಲ್ಲದೆ ಪ್ರತಿಯೊಬ್ಬ ಚಾಲಕರು ವಾಹನ ಚಾಲನೆ ಮಾಡುವಾಗ ಸಮವಸ್ತ್ರ ಧರಿಸಬೇಕು. ಈಗಾಗಲೇ ನಗರ ಪ್ರದೇಶಗಳಲ್ಲಿ ಓಡಿಸುವ ಆಟೋಗಳಿಗೆ ಪೊಲೀಸ್ ಇಲಾಖೆಯಿಂದ ನಂಬರ್ ನೀಡಲಾಗಿದೆ. ಗ್ರಾಮೀಣ ಭಾಗದ ಆಟೋಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡು ಹೋದರೆ ಅಂತಹ ವಾಹನಗಳನ್ನು ವಶಕ್ಕೆ ಪಡೆದು ಪರವಾನಗಿ ರದ್ದು ಮಾಡಲಾಗುವುದು ಎಂದರು.

ಇನ್ನೊಂದು ವಾರದಲ್ಲಿ ನಾನೇ ಖುದ್ದಾಗಿ ಸಾರಿಗೆ ಅಧಿಕಾರಿಗಳನ್ನು ಕರೆತಂದು ವಾಹನಗಳ ದಾಖಲೆಗಳನ್ನು ಪರಿಶೀಲಿಸುತ್ತೇನೆ. ಅಂದು ಎಲ್ಲ ಆಟೋಗಳನ್ನು ತಂದು ಕಡ್ಡಾಯವಾಗಿ ಹಾಜರಿರಬೇಕು. ತಮ್ಮಲ್ಲಿ ಗೊಂದಲವಿದ್ದಲ್ಲಿ ನಿಮ್ಮ ಅಧ್ಯಕ್ಷರ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು. ಪ್ರವಾಸಿಗರಿಗೆ ಹಾಗೂ ಮಹಿಳಾ ಪ್ರಯಾಣಿಕರಿಗೆ ತೊಂದರೆ ನೀಡಿದರೆ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ. ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ಅಂತಹವರ ವಾಹನ ಜಪ್ತಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಆಟೋ ಚಾಲಕರ ಸಂಘದ ಅಧ್ಯಕ್ಷ ದೀಪು ಮಾತನಾಡಿ, ನಮಗೆ ನಿಲ್ದಾಣಕ್ಕೆ ಜಾಗದ ಕೊರತೆ ಇದ್ದು, ಇಂತಿಷ್ಟು ಜಾಗದಲ್ಲಿ ನಮಗೆ ಆಟೋ ನಿಲ್ಲಿಸಲು ಅವಕಾಶ ಕಲ್ಪಿಸಿ. ಗ್ರಾಮೀಣ ಭಾಗದ ಆಟೋಗಳಿಗೆ ಅವರು ನಿಗದಿಪಡಿಸಿರುವ ಜಾಗದಲ್ಲಿ ಆಟೋಗಳನ್ನು ನಿಲ್ಲಿಸಲು ಸೂಚನೆ ನೀಡುವಂತೆ ಮನವಿ ಮಾಡಿದರು.

ಟ್ರಾಫಿಕ್ ಪಿಎಸ್‌ಐ ಶಂಕ್ರಪ್ಪ, ಸಿಬ್ಬಂದಿ ಪ್ರವೀಣ್, ದೇವರಾಜ್, ಚೇತನ್, ದೇವೇಂದ್ರ ಹಾಗೂ ಆಟೋ ಸಂಘದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net