ಅಕ್ಷರ ದಾಸೋಹ ಸಿಬ್ಬಂದಿ ಪ್ರತಿಭಟನೆ

Oplus_16908288
Oplus_16908288
Published on

ನಂಜನಗೂಡು: ಕೆಲಸದಿಂದ ವಜಾ ಮಾಡಿರುವ ಅಡುಗೆ ಸಹಾಯಕಿಯನ್ನು ಮತ್ತೆ ಕೆಲಸಕ್ಕೆ ನಿಯೋಜಿಸಿಕೊಳ್ಳಬೇಕು ಎಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.

ನಗರದ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ಜಮಾಯಿಸಿದ ಅಕ್ಷರ ದಾಸೋಹ ನೌಕರರು, ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಸರ್ಕಾರ, ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿದರು. ವಜಾಗೊಂಡಿರುವ ಅಡುಗೆ ಸಹಾಯಕಿಯನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.

ಅಕ್ಷರ ದಾಸೋಹದ ನೌಕರರ ಸಂಘದ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷೆ ಕೆ.ಮಂಜುಳಾ ಮಾತನಾಡಿ, ಕಂದೇಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 22 ವರ್ಷಗಳಿಂದ ಮುಖ್ಯ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ನಾಗಮ್ಮ ಅವರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದಾರೆ. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಪ್ರಧಾನ ಮಂತ್ರಿ ಪೋಷಣ್ ಶಕ್ತಿ ಯೋಜನೆಯ ಸಹಾಯಕ ನಿರ್ದೇಶಕರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಡುಗೆ ನೌಕರರಿಗೆ ತುಂಬಾ ಅನ್ಯಾಯವಾಗುತ್ತಿದ್ದು ಜೀವನ ನಡೆಸಲು ತುಂಬಾ ತೊಂದರೆಯಾಗಿದೆ. ಈ ಕೂಡಲೇ ಕೆಲಸದಿಂದ ವಜಾ ಮಾಡಿರುವ ಅಡುಗೆ ನೌಕರರನ್ನು ವಾಪಸ್ ತೆಗೆದುಕೊಳ್ಳಬೇಕು. ತಡೆ ಹಿಡಿದಿರುವ ವೇತನ ನೀಡಬೇಕು. ಇದಕ್ಕೆ ಕುಮ್ಮಕ್ಕು ನೀಡಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಸ್ಥಳಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ ಭೇಟಿ ನೀಡುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ನಮ್ಮ ಹೋರಾಟ ಹತ್ತಿಕ್ಕಲು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸೋಮಶೇಖರ್ ಅವರು ವಾಟ್ಸ್‌ಆ್ಯಪ್ ಮೂಲಕ ಅಡುಗೆ ಸಿಬ್ಬಂದಿ ಪ್ರತಿಭಟನೆಗೆ ಹೋಗಬಾರದು ಎಂದು ಮೆಸೇಜ್ ಹಾಕಿದ್ದಾರೆ. ಒಂದು ವೇಳೆ ಹೋರಾಟದಲ್ಲಿ ಪಾಲ್ಗೊಂಡರೆ ಅಂತಹ ಅಡುಗೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುತ್ತೇವೆ ಎಂದು ಮೆಸೇಜ್ ಹಾಕಿದ್ದಾರೆ. ಇದರಿಂದ ಹೆದರಿಕೊಂಡು ನಮ್ಮ ಅಡುಗೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಗೆ ಭಾಗವಹಿಸಿಲ್ಲ. ಇಂತಹ ಅಧಿಕಾರಿಗಳ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಪಂ ಇಒ ಜೆರಾಲ್ಡ್ ರಾಜೇಶ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವಿ ಆಲಿಸಿದರು. ವಾರದೊಳಗೆ ಅಡುಗೆ ಸಿಬ್ಬಂದಿಯನ್ನು ಕೆಸಲಕ್ಕೆ ನಿಯೋಜಿಸಲಾಗುವುದು. ತಡೆ ಹಿಡಿದಿರುವ ವೇತನ ಕೊಡಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ಸಿಐಟಿಯು ಜಿಲ್ಲಾಧ್ಯಕ್ಷ ಬಾಲಾಜಿ, ದಲಿತ ಸಂಘರ್ಷ ಸಮಿತಿ ಸಂಚಾಲಕ ಬೊಕ್ಕಹಳ್ಳಿ ಲಿಂಗಯ್ಯ, ರಾಜಶೇಖರ್ ಶೇಕಿ, ದೇವರಸನಹಳ್ಳಿ ಮಹದೇವಸ್ವಾಮಿ, ಕಾರ್ಯದರ್ಶಿ ರತ್ನಮ್ಮ, ನೀಲಮ್ಮ, ನಾಗಮ್ಮ, ಕಮಲಾಕ್ಷಿ, ಆಶಾ, ಸಾಕಮ್ಮ, ಶೋಭಾ, ಸವಿತಾ, ಸುವರ್ಣಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net