ಅಕ್ರಮಗಳಿಗೆ ಸ್ವಾಮಿತ್ವ ಜಾರಿಯಿಂದ ಬ್ರೇಕ್

FotoJet (3)
Published on

 ಯೋಜನೆ ಸದ್ಬಳಕೆಗೆ ವಿವೇಕ್ ಮಹದೇವ್ ಸಲಹೆ | ಸರ್ವೇ ನಂತರ ಮನೆಗೆ ತಲುಪಲಿದೆ ಪ್ರಾಪರ್ಟಿ ಕಾರ್ಡ್

 ಚಿಕ್ಕಬಳ್ಳಾಪುರ : ಆಸ್ತಿಯ ಮಾಲೀಕತ್ವ ದೃಢಪಡಿಸಿ, ಅಕ್ರಮಗಳಿಗೆ ಕಡಿವಾಣ ಹಾಕುವ ಸ್ವಾಮಿತ್ವ ಯೋಜನೆಯನ್ನು ಉಪಯೋಗಿಸಿಕೊಳ್ಳುವಂತೆ ಭೂ ದಾಖಲೆ ಇಲಾಖೆ ಸಹಾಯಕ ನಿರ್ದೇಶಕ ವಿವೇಕ್ ಮಹದೇವ್ ಸಲಹೆ ನೀಡಿದರು.

ತಾಲೂಕಿನ ಕಮ್ಮಗುಟ್ಟಹಳ್ಳಿಯಲ್ಲಿ ಸ್ವಾಮಿತ್ವ ಯೋಜನೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ಈ ಯೋಜನೆಯಡಿ ನಗರ ಹಾಗೂ ಗ್ರಾಮ ಠಾಣಾ ವ್ಯಾಪ್ತಿಯ ಎಲ್ಲ ಮನೆ, ನಿವೇಶನಗಳ ಅಳತೆ ಮಾಡಿ, ಬಳಿಕ ಸಂಬಂಧಿಸಿದ ದಾಖಲೆಗಳ ಪ್ರಾಪರ್ಟಿ ಕಾರ್ಡ್ (ಡಿಜಿಟಲ್ ಕಾರ್ಡ್) ಅನ್ನು ಆಸ್ತಿಗಳ ಮಾಲೀಕರಿಗೆ ಉಚಿತವಾಗಿ ನೀಡಲಾಗುತ್ತದೆ. ಇದು ಸರ್ಕಾರದ ಒಂದು ಉತ್ತಮ ಯೋಜನೆಯಾಗಿದೆ ಎಂದು ತಿಳಿಸಿದರು.

ಸ್ವಾಮಿತ್ವ ಯೋಜನೆಯ ಮೇಲ್ವಿಚಾರಕ ಜಿ.ದೇವರಾಜ್, ಭೂ ಮಾಪಕರಾದ ಸಂತೋಷ್ ಮಧು, ಸುದರ್ಶನ್, ನವೀನ್ ಕುಮಾರ್, ಶಬನಮ್‌ತಾಜ್, ನವೀನ್, ಮಮತಾ, ಕಿಶೋರ್ ಮತ್ತಿತರರು ಇದ್ದರು.

ಸ್ವಾಮಿತ್ವ ಯೋಜನೆಯಡಿ ದಾಖಲೆ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಸ್ವಾಮಿತ್ವ ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಜಾರಿಗೊಳಿಸಲಾಗುತ್ತಿದೆ. ಗ್ರಾಮ ಸಭೆಗಳಲ್ಲಿ ಯೋಜನೆಯಡಿ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದು ಬಳಿಕ ಗ್ರಾಮಕ್ಕೆ ಭೂಮಾಪಕರು ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ದಾಖಲೆಗಳೊಂದಿಗೆ ತೆರಳಿ, ಮನೆ ನಿವೇಶನದ ಸರ್ವೇ ಕಾರ್ಯ ನಡೆಸಲಿದ್ದಾರೆ. ನಂತರ ಸಂಬಂಧಿಸಿದ ಪ್ರಾಪರ್ಟಿ ಕಾರ್ಡ್ ತಯಾರಿಸಿ ಮಾಲೀಕರಿಗೆ ನೀಡಲಾಗುವುದು. ಇದರಿಂದ ಜಾಗದ ದಾಖಲೆಗಳ ಸಂಗ್ರಹದ ಜತೆಗೆ ಅಕ್ರಮಗಳಿಗೆ ಅವಕಾಶ ಇಲ್ಲದಂತಾಗುತ್ತದೆ ಎನ್ನುವುದು ಅಧಿಕಾರಿಗಳ ಮಾತು.

11 ಗ್ರಾಮಗಳ ಆಯ್ಕೆ

ಚಿಕ್ಕಬಳ್ಳಾಪುರ ತಾಲೂಕಿನ ಕಮ್ಮಗುಟ್ಟಹಳ್ಳಿ, ಗೊಂತಗಾನಹುಡ್ಯ, ಹಿರೇನಾಗವಲ್ಲಿ, ಜನ್ನಲಕುಂಟೆ, ಚಿಕ್ಕನಾಗವಲ್ಲಿ, ಕೆಂಚೇನಹಳ್ಳಿ, ನಲ್ಲಗುಟ್ಟಹಳ್ಳಿ, ಕೊಡೂರು, ಗೇರುಮರದಹಳ್ಳಿ, ಮುದ್ದಲಹಳ್ಳಿ, ನಾರೆಪ್ಪನಹಳ್ಳಿ ಹಾಗೂ ಮನ್ನಾರ್‌ಪುರವನ್ನು ಮೊದಲ ಹಂತದಲ್ಲಿ ಸ್ವಾಮಿತ್ವ ಯೋಜನೆಯಡಿ ಸರ್ವೇ ಕಾರ್ಯಕ್ಕೆ ಆಯ್ಕೆ ಮಾಡಲಾಗಿದೆ.

ಜಿಲ್ಲಾಮಟ್ಟದಲ್ಲೂ ಸೇವೆ

ಜಿಲ್ಲೆಗೆ ಸಂಬಂಧಿಸಿದಂತೆ ಸ್ವಾಮಿತ್ವ ಯೋಜನೆಯ ಜಿಲ್ಲಾಮಟ್ಟದ ಕಚೇರಿಯನ್ನು ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿ ಕಟ್ಟಡದಲ್ಲಿ ಪ್ರಾರಂಭಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net