ಅಕ್ರಮ ಸಂಬಂಧಕ್ಕಾಗಿ ಮಕ್ಕಳನ್ನೇ ಬಲಿಕೊಟ್ಟ ತಾಯಿ

FotoJet (2)
Published on

ಅನಾರೋಗ್ಯ ನೆಪವೊಡ್ಡಿ ಉಸಿರುಗಟ್ಟಿಸಿ ಕೊಲೆ | ಪ್ರಿಯಕರನೊಂದಿಗೆ ಬೆಂಗಳೂರಿನಿಂದ ರಾಮನಗರಕ್ಕೆ ಪಲಾಯನ


ರಾಮನಗರ : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪುಟಾಣಿ ಮಕ್ಕಳನ್ನು ಪ್ರಿಯಕರನೊಂದಿಗೆ ಸೇರಿ ತಾಯಿಯೇ ಕೊಲೆ ಮಾಡಿರುವ ವಿಚಿತ್ರ ಘಟನೆ ನಗರದ ಐಜೂರಿನ ಗೀತಾ ಮಂದಿರ ಬಡಾವಣೆಯಲ್ಲಿ ನಡೆದಿದೆ.
ಬೆಂಗಳೂರಿನ ದೇವರ ಜೀವನಹಳ್ಳಿ ಠಾಣಾ ವ್ಯಾಪ್ತಿಯ ಎಕೆ ಕಾಲನಿಯ ಕಬಿಲ (2), ಕಬೀಲನ್ (11 ತಿಂಗಳು) ಮೃತರು. ಮದುವೆಯಾಗಿದ್ದರೂ ಬೇರೊಬ್ಬನ ಪ್ರೀತಿ ಪಾಷಕ್ಕೆ ಬಿದ್ದ ಎ.ಕೆ. ಕಾಲನಿಯ ಶಿವ ಅವರ ಪತ್ನಿ ಸ್ವೀಟಿ ಮತ್ತು ಈಕೆಯ ಪ್ರಿಯಕರ ಗ್ರೆಗೋರಿ ಪ್ರಾನ್ಸಿಸ್ ಮಕ್ಕಳನ್ನು ಕೊಂದವರು.
ಪ್ರಿಯಕರನೊಂದಿಗೆ ಪಲಾಯನ:
ಸ್ವೀಟಿ, ಕೂಲಿ ಮಾಡುತ್ತಿದ್ದ ಶಿವ ಎನ್ನುವರನ್ನು ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದಳು. ಆದರೆ, ಇತ್ತೀಚೆಗೆ ಕಾಲ್ ಸೆಂಟರ್‌ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರೆಗೋರಿ ಪ್ರಾನ್ಸಿಸ್ ನೊಟ್ಟಿಗೆ ಪ್ರೇಮಾಂಕುರವಾಗಿತ್ತು. ಈ ಹಿನ್ನೆಲೆಯಲ್ಲಿ ಗಂಡನನ್ನು ಬಿಟ್ಟು ಸ್ವೀಟಿ, ಇಬ್ಬರು ಮಕ್ಕಳೊಂದಿಗೆ ಪ್ರಾನ್ಸಿಸ್‌ನೊಂದಿಗೆ ಪರಾರಿಯಾಗಿದ್ದಳು. ಆದರೆ, ಕೆಲವು ದಿನಗಳ ನಂತರ ಮನೆಗೆ ವಾಪಾಸಾಗಿದ್ದ ಸ್ವೀಟಿ, ಗಂಡನ ಖಾತೆಯಲ್ಲಿದ್ದ ಹಣ ಬಳಕೆ ಮಾಡಿಕೊಂಡಿದ್ದರಿಂದ ಭಯಗೊಂಡು ಮನೆ ಬಿಟ್ಟು ಹೋಗಿದ್ದೆ ಎಂದು ಸಬೂಬು ಹೇಳಿದ್ದಳು. ಕೆಲ ದಿನಗಳ ಬಳಿಕ ಮಕ್ಕಳನ್ನು ಮನೆಗೆ ಕರೆ ತರಲಾಗಿತ್ತು.
ಇಷ್ಟರಲ್ಲೇ ಈಕೆಯ ಬ್ಯಾಗ್‌ನಲ್ಲಿದ್ದ ಗ್ರೆಗೋರಿ ಪ್ರಾನ್ಸಿಸ್‌ನ ಆಧಾರ್‌ಕಾರ್ಡ್ ಇಬ್ಬರ ನಡುವಿನ ಅಕ್ರಮ ಸಂಬಂಧವನ್ನು ಬಯಲಿಗೆ ತಂದಿತ್ತು. ಇದಾದ ನಂತರ ಮತ್ತೆ ಸೆ.15ರಂದು ಮಕ್ಕಳ ಸಮೇತ ಸ್ವೀಟಿ ಮನೆ ಬಿಟ್ಟು ಪರಾರಿ ಆಗಿದ್ದಳು. ಈ ಬಾರಿ ಆಕೆ ತನ್ನ ಪ್ರಿಯಕರನೊಂದಿಗೆ ಬಂದು ಸೇರಿದ್ದು ರಾಮನಗರಕ್ಕೆ.

ಅಲ್ಲಿ ಪ್ರಕರಣ - ಹುಡುಕಾಟ
ಹೆಂಡತಿ ಕಾಣೆ ಆಗುತ್ತಿದ್ದಂತೆ ಈಕೆಯ ಅಕ್ರಮ ಸಂಬಂಧ ಬಗ್ಗೆ ಮಾಹಿತಿ ಇದ್ದ ಪತಿ ಶಿವು ಬೆಂಗಳೂರಿನ ದೇವರ ಜೀವನಹಳ್ಳಿ (ಡಿಜೆ ಹಳ್ಳಿ) ಪೊಲೀಸ್ ಠಾಣೆಯಲ್ಲಿ ಪತ್ನಿ ಮತ್ತು ಮಕ್ಕಳಿಬ್ಬರ ಕಾಣೆ ಬಗ್ಗೆ ಸೆ.17ರಂದು ದೂರು ದಾಖಲು ಮಾಡಿದ್ದ. ಜತೆಗೆ ಹುಡುಕಾಟ ಆರಂಭಿಸಿದ್ದ. ಈ ಹುಡುಕಾಟ ಶಿವುನನ್ನು ರಾಮನಗರಕ್ಕೆ ತಂದು ನಿಲ್ಲಿಸಿತ್ತು. ಹುಡುಕುತ್ತಾ ಸ್ವೀಟಿ ಮತ್ತು ಗ್ರೆಗೋರಿ ಇದ್ದ ಮನೆಗೆ ಬಂದು ಇಬ್ಬರನ್ನೂ ಪತ್ತೆ ಹಚ್ಚಿದ್ದ.

ಕಾವಲುಗಾರನ ಸಮಯ ಪ್ರಜ್ಞೆ
ಸ್ವೀಟಿ ಮತ್ತು ಗ್ರೆಗೋರಿ ಇದ್ದ ಮನೆಯ ಬಳಿ ವಿಚಾರಿಸಿದಾಗ ಇಬ್ಬರು ಮಕ್ಕಳು ಸತ್ತು ಹೋಗಿದ್ದಾರೆ ಎನ್ನುವ ಸುದ್ದಿಯೊಂದು ಹೊರ ಬಂದಿತ್ತು. ಇಷ್ಟಕ್ಕೆ ಸುಮ್ಮನಾಗದ ಶಿವು, ರಾಮನಗರ ಎಪಿಎಂಸಿಯಲ್ಲಿರುವ ರುದ್ರ ಭೂಮಿಯಲ್ಲಿ ವಿಚಾರ ಮಾಡಿದ್ದಾರೆ. ಈ ವೇಳೆ ರುದ್ರಭೂಮಿಯ ಕಾವಲುಗಾರ ಮುನಿರಾಜು, ಅ.1ರಂದು ಅನಾರೋಗ್ಯದ ಕಾರಣ ಮಗು ಸತ್ತಿದೆ ಎಂದು ಅಂತ್ಯ ಸಂಸ್ಕಾರ ಮಾಡಿದ್ದಾರೆ. ನಂತರ ಅ.7ರಂದು ಎರಡನೇ ಮಗುವನ್ನು ಅಂತ್ಯ ಸಂಸ್ಕಾರ ಮಾಡಲು ಬಂದ ವೇಳೆ ವಿಚಾರಿಸಿದಾಗ ಮತ್ತೆ ಅದೇ ಉತ್ತರ ನೀಡಿದರು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡು ವಿಡಿಯೋ ಮಾಡಿಕೊಂಡಿರುವುದಾಗಿ ಕಾವಲುಗಾರ ಮಾಹಿತಿ ನೀಡಿದ್ದಾರೆ.

ಅವನಿಗೆ ಬೇಡವಾಗಿತ್ತು?
ಸ್ವೀಟಿಯ ಇಬ್ಬರು ಮಕ್ಕಳು ಗ್ರೆಗೋರಿ ಪ್ರಾನ್ಸಿಸ್‌ಗೆ ಬೇಡವಾಗಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಮಕ್ಕಳನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದಾರೆ. ವಾರದ ಅಂತರದಲ್ಲಿ ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಅನಾರೋಗ್ಯದ ಕಾರಣ ಮೃತಪಟ್ಟಿದೆ ಎನ್ನುವ ಮಾಹಿತಿಯನ್ನು ಕೇಳಿದವರಿಗೆ ನೀಡಿದ್ದರು ಎನ್ನಲಾಗಿದೆ.

ಬಾಡಿಗೆ ಪಡೆದಿದ್ದರು
ನಗರದ ಗೀತಾ ಮಂದಿರ ಬಡಾವಣೆಯ ಮನೆಯೊಂದನ್ನು ನಾವು ದಂಪತಿ ಎಂದು ಹೇಳಿಕೊಂಡು ಬಾಡಿಗೆ ಪಡೆದಿದ್ದರು. ಇದಕ್ಕಾಗಿ ಮನೆ ಮಾಲೀಕರಿಗೆ 15 ಸಾವಿರ ರೂ. ಪಾವತಿ ಮಾಡಿದ್ದರು. ಬಾಣಸವಾಡಿ ಮೂಲದ ಗ್ರೆಗೋರಿ ಪ್ರಾನ್ಸಿಸ್ ಕಾಲ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ವರ್ಕ್ ್ರಂ ಹೋಂ ಕಾರಣ ಮನೆಯಲ್ಲಿ ಇದ್ದುಕೊಂಡು ಕೆಲಸ ಮಾಡುತ್ತಿದ್ದ.

ಪೊಲೀಸ್ ಕಸ್ಟಡಿಗೆ
ಸ್ವೀಟಿ ಪತಿ ನೀಡಿದ ದೂರು ಮತ್ತು ಸ್ಮಶಾನದ ಕಾವಲುಗಾರ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದ ಐಜೂರು ಠಾಣೆ ಪಿಎಸ್‌ಐ ದುರ್ಗಪ್ಪ ಮತ್ತು ಸಿಬ್ಬಂದಿ ತಕ್ಷಣವೇ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರು. ನಂತರ ರಾಮನಗರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನಾಳೆ ಶವ ಪರೀಕ್ಷೆ
ಆರೋಪಿಗಳನ್ನು ನಗರದ ಗೀತಾ ಮಂದಿರ ಬಡಾವಣೆಯಲ್ಲಿದ್ದ ಬಾಡಿಗೆ ಮನೆಗೆ ಭಾನುವಾರ ಕರೆತಂದು ಸ್ಥಳ ಮಹಜರು ಮಾಡಿರುವ ಐಜೂರು ಪೊಲೀಸರು, ಮಕ್ಕಳ ಶವಗಳನ್ನು ಉಪವಿಭಾಗಾಧಿಕಾರಿ ಅನುಮತಿ ಪಡೆದು ಸೋಮವಾರ ಹೊರ ತೆಗೆದು, ಶವ ಪರೀಕ್ಷೆ ಮಾಡಿಸಿ, ಸಂಬಂಧಪಟ್ಟವರಿಗೆ ಹಸ್ತಾಂತರ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net