ಅಂಬೇಡ್ಕರ್‌ಗೆ ಕಾಂಗ್ರೆಸ್ ಮಾಡಿದ ಅಪಮಾನ ಅಷ್ಟಿಷ್ಟಲ್ಲ

bkt-19-12
ಬಾಗಲಕೋಟೆಯಲ್ಲಿ ಮಾಜಿ ಸಚಿವ ಈಶ್ವರಪ್ಪ ಅವರು ಗ್ರಾಮ ದೇವಿಯ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ವೀರಣ್ಣ ಹಳೇಗೌಡರ, ಜಾತ್ರಾ ಸಮಿತಿ ಉಪಾಧ್ಯಕ್ಷ ಅಶೋಕ ಲಿಂಬಾವಳಿ ಇದ್ದರು.
Published on

ಬಾಗಲಕೋಟೆ: ಡಾ.ಬಿ.ಆರ್.ಅಂಬೇಡ್ಕರ್ ಅವರು ಜೀವಂತ ಇದ್ದಾಗ ಕಾಂಗ್ರೆಸ್ ಪಕ್ಷ ಅವರಿಗೆ ಮಾಡಿದ ಅಪಮಾನ ಅಷ್ಟಿಷ್ಟಲ್ಲ. ಅವರನ್ನು ಎರಡು ಸಲ ಚುನಾವಣೆಯಲ್ಲಿ ಸೋಲಿಸಿದರು. ಕೇಂದ್ರ ಸಚಿವ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದಾಗ ಅವರು ರಾಜೀನಾಮೆ ಕೊಟ್ಟರೆ ಕೊಡಲಿ ಬಿಡಿ ಎಂದು ನೆಹರು ಅವರು ಸುಮ್ಮನಾಗಿದ್ದರು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಾಗಲಕೋಟೆಯಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಈಶ್ವರಪ್ಪ, ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆಯನ್ನು ತಿರುಚಿ ಅದರಿಂದ ದುರ್ಲಾಭ ಪಡೆಯಲು ಕಾಂಗ್ರೆಸ್ ಮುಂದಾಗಿದೆ. ಶಾ ಮಾತಿನ ಅರ್ಥ ಏನಂದರೆ ಬಾಯಿಂದ ಮಾತ್ರ ಕಾಂಗ್ರೆಸ್‌ನವರು ಅಂಬೇಡ್ಕರ್ ಅಂಬೇಡ್ಕರ್ ಎನ್ನುತ್ತಾರೆ. ಹೃದಯದಿಂದ ಹೇಳುತ್ತಿಲ್ಲ. ಅಂಬೇಡ್ಕರ್ ಅಂಬೇಡ್ಕರ್ ಎಂದು ಹೇಳುವ ಬದಲು ನೀವು ದೇವರ ನಾಮಸ್ಮರಣೆ ಮಾಡಿದರೆ ನಿಮಗೆ ಸ್ವರ್ಗದಲ್ಲಿ ಜಾಗ ಸಿಗುತ್ತದೆ ಎಂಬರ್ಥದಲ್ಲಿ ಹೇಳಿದ್ದಾರೆಂದು ಸಮರ್ಥಿಸಿದರು.

ಕಾಂಗ್ರೆಸ್ ಪಕ್ಷದವರು ಅಂಬೇಡ್ಕರ್ ಅವರು, ದಲಿತರು, ಹಿಂದುಳಿದವರು ಅಭಿವೃದ್ಧಿ ಅಗಬೇಕು ಎನ್ನುವ ಆಸೆ ಹೊಂದಿದ್ದರು. ಅದಕ್ಕಾಗಿಯೇ ಮೀಸಲಾತಿ ವ್ಯವಸ್ಥೆಯನ್ನು ತಂದರು. ದೇಶದ ಸ್ವಾತಂತ್ರ‍್ಯದ ಬಳಿಕ ಅಧಿಕಾರ ನಡೆಸಿದ ಕಾಂಗ್ರೆಸ್ ಎಂದೂ ಸಹ ದಲಿತರನ್ನು ಅಭಿವೃದ್ಧಿ ಮಾಡಲೇ ಇಲ್ಲ. ಅಂಬೇಡ್ಕರ್ ಅವರು ಸಾವನ್ನಪ್ಪಿದಾಗ ಅವರ ಅಂತ್ಯಸಂಸ್ಕಾರ ಕ್ಕೆ ದೆಹಲಿಯಲ್ಲಿ ಜಾಗವನ್ನು ಕೊಡಲಿಲ್ಲ. ಆದರೆ, ಬಿಜೆಪಿಯವರು ಯಾವಾಗಲೂ ಅಂಬೇಡ್ಕರ್ ಅವರಿಗೆ ಪೂರ್ಣ ಪ್ರಮಾಣದ ಗೌರವ ಕೊಡುತ್ತ ಬಂದಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರಿಗೆ ಮಾಡಿದ ಮೋಸವನ್ನು ಈ ಸಮಾಜ ಎಂದಿಗೂ ಮರೆಯಲ್ಲ ಎಂದರು.

ಇನ್ನು ಅಮಿತ್ ಶಾ ಹೇಳಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಪತ್ರ ಬರೆದಿದ್ದಾರೆ. ಅದೇ ವಾಲ್ಮೀಕಿ ನಿಗಮದ ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ವಾಲ್ಮೀಕಿ ಹಗರಣದಲ್ಲಿ ಸಿಲುಕಿ ರಾಜೀನಾಮೆ ನೀಡಿ ಜೈಲಿಗೆ ಹೋಗಿದ್ದ ವ್ಯಕ್ತಿಯನ್ನು ಈತಗ ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಇದು ದಲಿತರಿಗೆ ಕಾಂಗ್ರೆಸ್ ಪಕ್ಷ ಮಾಡುವ ದ್ರೋಹವಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net