

ತಿ.ನರಸೀಪುರ: ಐದಾರು ದಶಕಗಳ ಕಾಲ ದೇಶವನ್ನು ಆಳ್ವಿಕೆ ನಡೆಸಿದ ಕಾಂಗ್ರೆಸ್ ಅಂಬೇಡ್ಕರ್ ಕುರಿತಾದ ನೈಜ ವಿಚಾರಗಳನ್ನು ಮುಚ್ಚಿಟ್ಟಿತ್ತು. ಸಮಗ್ರ ಭಾರತದ ಅಭಿವೃದ್ಧಿಗೆ ಪೂರಕವಾಗಿದ್ದ ಮೂಲ ಸಂವಿಧಾನವನ್ನು ಆಡಳಿತದಲ್ಲೂ ಜಾರಿಗೆ ತರಲಿಲ್ಲ ಎಂದು ಬಿಜೆಪಿ ಮುಖಂಡ ಡಾ.ಎಂ.ರೇವಣ್ಣ ಆರೋಪಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾನುವಾರ ‘ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವಿಚಾರ ಯಾತ್ರೆ ಹಾಗೂ ಕಾಂಗ್ರೆಸ್ ಸುಡುವ ಮನೆ ಎಚ್ಚರ, ಬಾಬಾ ಸಾಹೇಬರು ಹೀಗೇಕೆ ಹೇಳಿದರು’ ವಿಷಯ ಕುರಿತು ಏರ್ಪಡಿಸಿದ್ದ ವಿಚಾರಗೋಷ್ಠಿ, ಸಂವಾದ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸಂವಿಧಾನವನ್ನು ಯಥಾವತ್ತಾಗಿ ಜಾರಿಗೆ ತಂದಿದ್ದರೆ ಇಷ್ಟು ಹೊತ್ತಿಗೆ ಭಾರತ ಬಲಿಷ್ಠ ರಾಷ್ಟ್ರವಾಗಿರುತ್ತ್ತಿತ್ತು ಎಂದರು.
ಅಂಬೇಡ್ಕರ್ ಅವರ ಕುರಿತು ಕಾಂಗ್ರೆಸ್ ಮುಚ್ಚಿಟ್ಟಿರುವ ಸಂಗತಿಗಳನ್ನು ನಿಜವಾದ ಜನರಿಗೆ ತಿಳಿಸಲು ಬಿಜೆಪಿ ಸಾಮಾಜಿಕ ನ್ಯಾಯಕ್ಕಾಗಿ ನಾವು ಎಂಬ ವೇದಿಕೆ ಮೂಲಕ ಎಲ್ಲೆಡೆ ಅಂಬೇಡ್ಕರ್ ವಿಚಾರ ಯಾತ್ರೆಯನ್ನು ಆರಂಭಿಸಿದೆ. ಏ.29ರಂದು ಬೆಳಗ್ಗೆ 11 ಗಂಟೆಗೆ ಎಂ.ಮಹದೇವಪ್ಪ ಸ್ಮಾರಕ ಭವನದಲ್ಲಿ ವರುಣ ಮತ್ತು ನರಸೀಪುರ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ವಿಚಾರಗೋಷ್ಠಿ, ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಎರಡು ತಾಲೂಕಿನ ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳು ಹಾಗೂ ಎಲ್ಲ ಸಮುದಾಯದ ಪ್ರಮುಖರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ದಾಸಯ್ಯ, ಮಂಡಲ ಕ್ಷೇತ್ರಾಧ್ಯಕ್ಷ ಶಿವಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್, ಪ್ರಧಾನ ಕಾರ್ಯದರ್ಶಿ ಡಾ.ಟಿ.ಎಸ್.ಮಲ್ಲಿಕಾರ್ಜುನಸ್ವಾಮಿ, ಟೌನ್ ಅಧ್ಯಕ್ಷ ಕೆ.ನಂಜುಂಡಸ್ವಾಮಿ, ರೈತ ಮೋರ್ಚಾ ಅಧ್ಯಕ್ಷ ಸೋಮಶೇಖರಪ್ಪ, ಎಸ್‌ಸಿ ಮೋರ್ಚಾ ಅಧ್ಯಕ್ಷ ಚೌಹಳ್ಳಿ ಸಿದ್ದರಾಜು, ಯುವ ಮೋರ್ಚಾ ಅಧ್ಯಕ್ಷ ಶ್ರೀನಾಥ್, ಪುರಸಭೆ ಮಾಜಿ ಸದಸ್ಯ ಎನ್.ಲೋಕೇಶ್, ಮುಖಂಡರಾದ, ಸಿ.ಎಂ.ಪ್ರಕಾಶ್, ಕರೋಹಟ್ಟಿ ರಾಜಶೇಖರ್, ವಾಟಾಳ್ಪುರ ಸುರೇಶ್, ದೊಡ್ಡಪುರ ಲಕ್ಷ್ಮಣ ಇತರರಿದ್ದರು.