ಅಂತೂ ಇರಾನ್​ನಿಂದ ಮರಳಿದ ಯಾಸೀನ್ ಶಾ ಮಕಾನದಾರ

Yaseen
Published on

| ರಾಮಚಂದ್ರ ಕಿಣಿ ಭಟ್ಕಳ

ಇರಾನ್​ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಟ್ಕಳ ಮೂಲದ ವ್ಯಕ್ತಿಗೆ ಪ್ರಧಾನಮಂತ್ರಿ ಕಚೇರಿ ನೆರವಾಗಿದೆ. ಪರಿಣಾಮ ಅವರು ಇರಾನ್​ನಿಂದ ಮಂಗಳವಾರ ಹೊರಟಿದ್ದಾರೆ. ಭಟ್ಕಳ ಮೂಲದ ಯಾಸೀನ್ ಶಾ ಮಕಾನದಾರ ಸರಕು ಹಡಗಿನಲ್ಲಿ ಸಮುದ್ರಯಾನಗಾರನಾಗಿ ಕೆಲಸ ಮಾಡುತ್ತಿದ್ದರು. 2020ರ ಜನವರಿ 12ರಂದು ಇರಾನ್ ಬಂದರಿನಲ್ಲಿ ಇಳಿದಿದ್ದರು. ಕೋವಿಡ್ ಕಾರಣದಿಂದ ಹಡಗನ್ನು ಬಂದರಿನಲ್ಲೇ ಲಂಗರು ಹಾಕಲಾಗಿತ್ತು. ಈ ಹಡಗು ಮೂವರ ಪಾಲುದಾರಿಕೆ ಹೊಂದಿತ್ತು. ಹಡಗು ಮಾಲೀಕರ ನಡುವಿನ ವಿವಾದದಿಂದ ಯಾಸೀನ್ ಇರಾನ್ ಬಂದರಿನಲ್ಲಿ ಕಠಿಣ ಜೀವನ ನಡೆಸುತ್ತಿದ್ದರು. ಇದೀಗ ಸರಕು ಹಡಗುಗಳ ಸಂಚಾರ ಪುನರಾರಂಭಗೊಂಡಿದ್ದರೂ ಯಾಸೀನ್ ಇರುವ ಹಡಗು ಅಲ್ಲಿಂದ ತೆರಳಿಲ್ಲ. ಯಾಸೀನ್ ಇರಾನ್​ಗೆ ತೆರಳಲು ಒಂದು ಏಜೆನ್ಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಒಪ್ಪಂದವನ್ನು ಇರಾನ್​ನಲ್ಲಿ ಬದಲಿಸಲಾಗಿತ್ತು. ಬಹುತೇಕ ಇರಾನ್ ಏಜೆನ್ಸಿಗಳು ಪರ್ಸಿಯನ್ ಭಾಷೆಯ ಒಪ್ಪಂದ ಪತ್ರಕ್ಕೆ ಸಹಿ ಹಾಕಿಸಿಕೊಂಡು, ವೇತನ ಪಾವತಿಸದೆ ಕೆಲಸಗಾರರಿಗೆ ವಂಚಿಸುತ್ತವೆ. ಆದರೆ, ಪರ್ಸಿಯನ್ ಭಾಷೆ ಅಲ್ಪಸ್ವಲ್ಪ ತಿಳಿದಿದ್ದ ಯಾಸೀನ್, ಏಜೆನ್ಸಿಯ ಒಪ್ಪಂದ ಪತ್ರಕ್ಕೆ ಸಹಿ ಹಾಕದೆ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ಕುರಿತು ಇರಾನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂರ್ಪಸಿದಾಗ ಹಡಗು ಕಂಪನಿ ಮಾಲೀಕರನ್ನು ಸಂರ್ಪಸಲು ಅಧಿಕಾರಿಗಳು ಏಮ್ ಇಂಡಿಯಾ ಫೋರಮ್ ಸಂಸ್ಥೆ ಸಂರ್ಪಸಿದ್ದರು. ಏಮ್ ಇಂಡಿಯಾ ಫೋರಂ ಸ್ಥಾಪಕ ಅಧ್ಯಕ್ಷ ಶಿರಾಲಿ ಶೇಖ್ ಮುಜಾಫರ್ ಅಲ್ಲಿನ ಏಜೆಂಟರು ಹಾಗೂ ಹಡಗು ಮಾಲೀಕರ ವಿವರ, ಮೊಬೈಲ್ ಸಂಖ್ಯೆಯನ್ನು ರಾಯಭಾರಿ ಕಚೇರಿಗೆ ನೀಡಿದ್ದರು. ಪ್ರಧಾನಿ ಕಚೇರಿ, ವಿದೇಶಾಂಗ ವ್ಯವಹಾರಗಳ ಮಂತ್ರಿ ಡಾ. ಜೈಶಂಕರ್, ಭಾರತೀಯ ರಾಯಭಾರಿ ಕಚೇರಿ ಸಕಾರಾತ್ಮಕವಾಗಿ ಸ್ಪಂದಿಸಿ, ಸಹಾಯ ಮಾಡಿದೆ.

ಕಳೆದ 600 ದಿನಗಳಿಂದ ನಾನು ಇಲ್ಲಿ ತುಂಬಾ ಸಂಕಷ್ಟದಲ್ಲಿದ್ದೆ. ಮನೆಯಿಂದ ಸಾಲ ಮಾಡಿ 6 ರಿಂದ 7 ಲಕ್ಷ ರೂ. ಖರ್ಚು ಮಾಡಿ ಇಲ್ಲಿಗೆ ಬಂದಿದ್ದೆ. ಆದರೆ, ಇಲ್ಲಿ ನನಗೆ ಮೋಸ ಮಾಡಲಾಯಿತು. ಯಾವುದೇ ಅಧಿಕೃತ ಒಪ್ಪಂದ ಇಲ್ಲದೆ ಕೆಲಸಕ್ಕಾಗಿ ವಿದೇಶಕ್ಕೆ ಬರಬೇಡಿ. ಅದರಲ್ಲೂ ಇರಾನ್ ಹಡಗಿನ ಕೆಲಸಕ್ಕೆ ಬರಲೆಬೇಡಿ. ನನಗೆ ಮಾತೃ ದೇಶಕ್ಕೆ ಬರಲು ಸಹಕರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಎಮ್ ಇಂಡಿಯಾ ಫೋರಮ್ ಸದಸ್ಯರಿಗೆ ಧನ್ಯವಾದಗಳು.

| ಯಾಸೀನ್ ಶಾ ಮಕಾನದಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net