ಅಂತಾರಾಜ್ಯ ಕಳ್ಳರ ಬಂಧನ

1Bnk01
Published on

ಬಂಕಾಪುರ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ-4ರ ಸಾಗರ ಡಾಬಾ ಬಳಿ ದರೋಡೆಗೆ ಹೊಂಚು ಹಾಕಿದ್ದ ನಾಲ್ವರು ಅಂತಾರಾಜ್ಯ ಕಳ್ಳರನ್ನು ಬಂಕಾಪುರ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

ಗೋವಾ ಮಡಗಾಂವ್​ನ ಸರತಾಜ ಅಬ್ದುಲ್​ವುುನಾಫ್ ಸುತಾರ (18), ವಾಸೀಂ ಮೈನುದ್ದೀನ್ ತಂಬಾಕ (18), ಹಳಿಯಾಳದ ಹಾಲಿ ವಸ್ತಿ ಮಡಗಾಂವ್​ನ ಸಾಹೀಲ್ ಮುನೀರ್​ಅಹ್ಮದ ಕಕ್ಕೇರಿ (18) ಹಾಗೂ ಒಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಬಂಧಿತ ಆರೋಪಿಗಳು. ಹಾನಗಲ್ಲ ಪಟ್ಟಣದ ಶಾರೂಖ್ ಮತ್ತು ಹಾವೇರಿಯ ಶಬ್ಬೀರಖಾನ್ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ಒಂದು ಸಿಜರೀನ್ ಬ್ಲೇಡ್, ಎರಡು ಖಾರದ ಪುಡಿ ಪಾಕೀಟ್, ಎರಡು ಚಾಕು, ಎರಡು ಕಬ್ಬಿಣದ ರಾಡು, ಐದು ಮೊಬೈಲ್​ಫೋನ್ ಮತ್ತು ಕಾರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶುಕ್ರವಾರ ರಾತ್ರಿ ಸಾಗರ ಡಾಬಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಡರೋಡೆ ಮಾಡಲು ಹೊಂಚು ಹಾಕಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಪಿಐ ಬಸವರಾಜ ಹಳಬಣ್ಣವರ ಮಾರ್ಗದರ್ಶನದಲ್ಲಿ ಪಿಎಸ್​ಐ ಸಂತೋಷ ಪಾಟೀಲ ಸಿಬ್ಬಂದಿ ದಾಳಿ ನಡೆಸಿ, ನಾಲ್ಕು ಆರೋಪಿಗಳನ್ನು ಬಂಧಿಸಿ ತನಿಖೆಗೆ ಒಳಪಡಿಸಿದಾಗ ದರೋಡೆಯ ಸಂಚು ಬಯಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಶೋಧ ಕಾರ್ಯ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಿಎಸ್​ಐ ಕೆ.ಎನ್. ಹಳ್ಳಿ ಪೇದೆಗಳಾದ ಮಂಜು ಲಮಾಣಿ, ರಮೇಶ ಅಗಸಿಬಾಗಿಲ, ಬಸು ಲಮಾಣಿ, ಎ.ಎಚ್. ನದಾಫ ತನಿಖಾ ತಂಡದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net