ಅಂತರ ಮಹಿಳಾ ಕಾಲೇಜ್‌ಗಳ ಯುವಜನೋತ್ಸವ

bkt-9-3
ಬಾಗಲಕೋಟೆ ನಗರದ ಬಿವಿವಿ ಸಂಘದ ಮಿನಿ ಸಭಾ ಭವನದಲ್ಲಿ ಶಾಸಕ ವೀರಣ್ಣ ಚರಂತಿಮಠ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಪದನಿಮಿತ್ತ ಕಾರ್ಯದರ್ಶಿ ಡಾ. ವಿಜಯಕುಮಾರ ಕಟಗಿಹಳ್ಳಿಮಠ, ಪ್ರಾಚಾರ್ಯರಾದ ಎಸ್.ಜೆ. ಒಡೆಯರ, ಪ್ರೊ. ವಿ.ಬಿ. ಕೋರಿಶೆಟ್ಟಿ ಉಪಸ್ಥಿತರಿದ್ದರು.
Published on

ಬಾಗಲಕೋಟೆ: ಅಂತರ ಮಹಿಳಾ ಕಾಲೇಜುಗಳ ಯುವ ಜನೋತ್ಸವ ಡಿ.೧೨ ರಿಂದ ೧೪ರ ವರೆಗೆ ಬಿವಿವಿ ಸಂಘದ ನೂತನ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಬಿವಿವಿ ಸಂಘದ ಬಸವೇಶ್ವರ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ೨೦೨೨-೨೩ನೇ ಶೈಕ್ಷಣಿಕ ಸಾಲಿನ ೧೭ನೇ ಶಕ್ತಿ ಸಂಭ್ರಮದ ಅಂತರ ಮಹಿಳಾ ಮಹಾವಿದ್ಯಾಲಯಗಳ ಯುವ ಜನೋತ್ಸವ ನಡೆಯಲಿದೆ. ಮಹಿಳಾ ವಿವಿ ವ್ಯಾಪ್ತಿಯ ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಬಳ್ಳಾರಿ, ಹಾವೇರಿ, ಕೊಪ್ಪಳ ಸೇರಿ ೧೩ ಜಿಲ್ಲೆಗಳ ೩೦ ಮಹಾವಿದ್ಯಾಲಯಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಳ್ಳುವರು. ವಿದ್ಯಾರ್ಥಿಗಳು, ನೃತ್ಯ ಸಂಯೋಜಕರಿಗೆ, ತಂಡದ ವ್ಯವಸ್ಥಾಪಕರಿಗೆ, ನಿರ್ಣಾಯಕರಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿ.೧೨ ರಂದು ಬೆಳಗ್ಗೆ ೧೦ ಗಂಟೆಗೆ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ ಯುವ ಜನೋತ್ಸವ ಉದ್ಘಾಟಿಸುವರು. ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ಚರಂತಿಮಠ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ನೃಪತುಂಗ ವಿವಿ ಕುಲಪತಿ ಪ್ರೊ. ಶ್ರೀನಿವಾಸ ಬಳ್ಳಿ, ವಿಜಯಪುರದ ಅಕ್ಕಮಹಾದೇವಿ ಮವಿವಿ ಕುಲಸಚಿವ ಪ್ರೊ. ಬಿ.ಎಸ್. ನಾವಿ, ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಮಹಿಳಾ ವಿವಿಯ ಪ್ರೊ. ಎಸ್.ಬಿ. ಕಾಮಶೆಟ್ಟಿ, ವಿದ್ಯಾರ್ಥಿನಿ ಕ್ಷೇಮಪಾಲನ ನಿರ್ದೇಶಕಿ ವಿ.ಬಿ. ಕೋರಿಶೆಟ್ಟಿ, ಪ್ರಾಚಾರ್ಯ ಎಸ್.ಜೆ. ಒಡೆಯರ ಉಪಸ್ಥಿತರಿರುವರು ಎಂದರು.
ಡಿ.೧೪ ರಂದು ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸುವರು. ಕಸಾಪ ನಿಟಕಪೂರ್ವ ರಾಜ್ಯಾಧ್ಯಕ್ಷ ಸಾಹಿತಿ ನಾಡೋಜ ಮನುಬಳಿಗಾರ, ದಾವಣಗೆರೆ - ರಂಗಾಯಣದ ಖ್ಯಾತ ರಂಗಭೂಮಿ ಕಲಾವಿದ, ನಿರ್ದೇಶಕ ಯಶವಂತ ಸರದೇಶಪಾಂಡೆ, ಮಹಿಳಾ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಕೆ. ರಮೇಶ ಇತರರು ಉಪಸ್ಥಿತರಿರುವರು ಎಂದ ಅವರು ಮೂರು ದಿನಗಳವರೆಗೆ ೨೬ ಸ್ಪರ್ಧೆಗಳು ನಡೆಯಲಿದ್ದು, ನಾಲ್ಕು ವೇದಿಕೆಗಳನ್ನು ನಿರ್ಮಿಸಲಾಗಿದೆ ಎಂದರು.
ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಪದನಿಮಿತ್ತ ಕಾರ್ಯದರ್ಶಿ ಡಾ. ವಿಜಯಕುಮಾರ ಕಟಗಿಹಳ್ಳಿಮಠ, ಪ್ರಾಚಾರ್ಯರಾದ ಎಸ್.ಜೆ. ಒಡೆಯರ, ಪ್ರೊ. ವಿ.ಬಿ. ಕೋರಿಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net