

ಭಟ್ಕಳ: ಲಾಕ್ಡೌನ್ ಇದ್ದರೂ ಪರಸ್ಪರ ಅಂತರವನ್ನು ಕಾಯ್ದುಕೊಳ್ಳದೆ ನೂರಾರು ಜನರು ಮಹಿಳೆಯೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಘಟನೆ ಪಟ್ಟಣದ ಚೌಥನಿಗೆ ತೆರಳುವ ಮುಖ್ಯರಸ್ತೆಯಲ್ಲಿ ಭಾನುವಾರ ನಡೆದಿದೆ. ಚೌಥನಿ ರಸ್ತೆಯ ನಿವಾಸಿ 38 ವರ್ಷದ ಮಹಿಳೆ ಅನಾರೋಗ್ಯದಿಂದಾಗಿ ಮುರ್ಡೆಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರು ಆಸ್ಪತ್ರೆಗೆ ತೆರಳಲು ವೈದ್ಯರು ಸೂಚಿಸಿದ್ದರು. ಮಂಗಳೂರಿಗೆ ತೆರಳಲು ಮನೆಯಲ್ಲಿ ಸಿದ್ಧತೆ ನಡೆಸುವಾಗ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ತಾಲೂಕಾಡಳಿತಕ್ಕೆ ಮಾಹಿತಿ ತಲುಪಿ ಪೊಲೀಸರು, ತಾಲೂಕಾಡಳಿತದ ಸಿಬ್ಬಂದಿ ಮನೆಗೆ ಬಂದು ಮೃತರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಮಹಿಳೆ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ನೂರಾರು ಜನರು ಸ್ಥಳಕ್ಕೆ ಆಗಮಿಸಿ ಕೋವಿಡ್- 19 ನಿಯಮವನ್ನು ಗಾಳಿಗೆ ತೂರಿದ್ದಾರೆ ಎಂದು ಕೆಲವು ಸಂಘಟನೆಗಳ ಸದಸ್ಯರು ಆರೋಪಿಸುತ್ತಿದ್ದಾರೆ. ಅಲ್ಲದೆ, ಸ್ಥಳದಲ್ಲಿ ಪೊಲೀಸರು ಇದ್ದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಎಎಸ್ಪಿ ಅವರಿಗೆ ಕೆಲವರು ದೂರು ನೀಡಿದ್ದಾರೆ. ಸಿಪಿಐ ದಿವಾಕರ ಸ್ಥಳಕ್ಕೆ ತೆರಳಿ ಜನರನ್ನು ಚದುರಿಸಿದ್ದಾರೆ.