ಅಂಚೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

23bkl3
Published on

ಭಟ್ಕಳ: ಸಾವಿರಕ್ಕೂ ಹೆಚ್ಚು ಅಂಚೆ ಪತ್ರಗಳು ಬಂದು ಬಿದ್ದಿದ್ದರೂ ಬಟವಾಡೆ ಮಾಡದ ಅಂಚೆ ಇಲಾಖೆಯ ಸಿಬ್ಬಂದಿ ವಿರುದ್ಧ ಆಕ್ರೋಶಗೊಂಡ ಸಾರ್ವಜನಿಕರು ಗುರುವಾರ ಅಂಚೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕಾಯ್ಕಿಣಿ ಅಂಚೆ ಪೇದೆಯೊಬ್ಬರು ಕಳೆದ ಕೆಲವು ತಿಂಗಳ ಹಿಂದೆ ಸೇವಾ ನಿವೃತ್ತಿ ಹೊಂದಿದ್ದು, ಈವರೆಗೂ ಅವರ ಜಾಗಕ್ಕೆ ಬೇರೆ ಪೇದೆಯನ್ನು ನೇಮಕ ಮಾಡಿಲ್ಲ. ಅವರ ಬದಲಿಗೆ ಬಟವಾಡೆ ಮಾಡುತ್ತಿದ್ದ ಯುವಕರಿಬ್ಬರಿಗೆ ವೇತನ ನೀಡದ್ದರಿಂದ ಅವರು ಕೆಲಸ ಮುಂದುವರೆಸಿಲ್ಲ. ಈಗಾಗಲೇ ಎರಡು ಬಾರಿ ಆನ್​ಲೈನ್​ನಲ್ಲಿ ಅಂಚೆ ಪೇದೆ ಹುದ್ದೆಗೆ ಅರ್ಜಿ ಕರೆದಿದ್ದರೂ ಪ್ರಯೋಜನವಾಗಿಲ್ಲ. ಇದರ ಪರಿಣಾಮ ಸಾವಿರಾರು ಪತ್ರಗಳು ಕಚೇರಿಯಲ್ಲೆ ಬಾಕಿ ಇದ್ದು ಸಾರ್ವಜನಿಕರಿಗೆ ತಲುಪುತ್ತಿಲ್ಲ.

ಇಲ್ಲಿನ ಕಾಯ್ಕಿಣಿಯ ಅಂಚೆ ಕಚೇರಿಯಲ್ಲಿ ಸುಮಾರು 1000ಕ್ಕೂ ಹೆಚ್ಚು ಅಂಚೆ ಪತ್ರಗಳು, ಆಧಾರ್ ಕಾರ್ಡ್ ಗಳು, ಪಾನ್ ಕಾರ್ಡ್​ಗಳು, ಆಮಂತ್ರಣ ಪತ್ರಿಕೆಗಳು, ಹಲವಾರು ಸಂದರ್ಶನ ಪತ್ರಗಳು ವಿಶೇಷವಾಗಿ ವಿಧವಾ ವೇತನ, ಅಂಗವಿಕಲರ ವೇತನ ಕೂಡಾ ಬಾಕಿ ಆಗಿದ್ದು, ಜನರು ದಿನಾಲೂ ಅಂಚೆ ಕಚೇರಿಗೆ ಅಲೆಯುವಂತಾಗಿದೆ. ಈ ಸಂದರ್ಭದಲ್ಲಿ ಈರಪ್ಪ ನಾಯ್ಕ, ನಾರಾಯಣ ನಾಯ್ಕ, ನಾಗೇಶ ದೇವಡಿಗ, ತಿಮ್ಮಪ್ಪ ನಾಯ್ಕ, ಲಕ್ಷ್ಮಣ ನಾಯ್ಕ, ಮಹಿಳೆಯರು, ವೃದ್ಧರು ಸೇರಿ ನೂರಾರು ಜನರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net