ಅಂಚೆ ಇಲಾಖೆಯ ಪ್ರಯೋಜನ ಪಡೆದುಕೊಳ್ಳಿ

12arsph1ep
ಅಪಘಾತದಲ್ಲಿ ಗಾಯಗೊಂಡಿದ್ದ ಗ್ರಾಪಂ ಸದಸ್ಯ ಚಂದ್ರೇಗೌಡರಿಗೆ ಅಧೀಕ್ಷಕ ಜೋಸೆಫ್ ರೋಡಿಗ್ರಸ್ ಪರಿಹಾರದ ಚೆಕ್ ವಿತರಿಸಿದರು. ವಿನಯ್, ಕರಗುಂದ ಸ್ವಾಮಿ ಇದ್ದರು.
Published on

ಅರಸೀಕೆರೆ: ಕೇಂದ್ರ ಸರ್ಕಾರ ಅಂಚೆ ಇಲಾಖೆ ಮೂಲಕ ಹಲವು ಸವಲತ್ತುಗಳನ್ನು ಗ್ರಾಮೀಣ ಜನರಿಗೆ ಒದಗಿಸುತ್ತಿದ್ದು, ಎಲ್ಲರೂ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಅಂಚೆ ಅಧೀಕ್ಷಕ ಜೋಸೆಫ್ ರೋಡಿಗ್ರಸ್ ಹೇಳಿದರು.

ತಾಲೂಕಿನ ಹಾರನಹಳ್ಳಿ ಗ್ರಾಮದ ಅಂಚೆ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ನಾಗರಿಕರ ಸುರಕ್ಷತೆ ಮನಗಂಡಿರುವ ಕೇಂದ್ರ ಸರ್ಕಾರ ಗ್ರಾಮೀಣ ಅಂಚೆ ಹಾಗೂ ಟಾಟಾ ಎಐಜಿ ಜೀವ ವಿಮಾ ಸೌಲಭ್ಯ ಜಾರಿಗೊಳಿಸಿದೆ. ಜನರು ಸುಲಭ ವಿಮಾ ಕಂತುಗಳನ್ನು ಪಾವತಿಸುವ ಮೂಲಕ ಸದುಪಯೋಗ ಮಾಡಿಕೊಂಡಲ್ಲಿ ಸಂಕಷ್ಟ ಕಾಲದಲ್ಲಿ ನೆರವಿಗೆ ಬರಲಿದೆ. ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ಸಮೀಪದ ಅಂಚೆ ಕಚೇರಿಗೆ ತೆರಳಿ ವಿವರ ಪಡೆದುಕೊಳ್ಳಬಹುದಾಗಿದೆ ಎಂದರು.

ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಉಳಿತಾಯ ಸೇರಿ ವಿವಿಧ ಖಾತೆಗಳನ್ನು ತೆರೆದಲ್ಲಿ ಹಣ ಉಳಿತಾಯವಾಗಲಿದೆ. ವೃದ್ಧಾಪ್ಯ, ಅಂಗವಿಕಲ, ವಿಧವಾ ಸೇರಿ ಎಲ್ಲ ಬಗೆಯ ಪಿಂಚಣಿ ಸೌಲಭ್ಯಗಳು ಅಂಚೆ ಕಚೇರಿ ಮೂಲಕ ನಡೆಯುತ್ತಿದೆ ಎಂದರು.
ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ ವ್ಯವಸ್ಥಾಪಕ ವಿನಯ್ ಮಾತನಾಡಿ, ಐಪಿಪಿಬಿಯಲ್ಲಿ ಜೀವ ವಿಮೆ ಮಾಡಿಸಿದಲ್ಲಿ ಅಪಘಾತ ಸಂದರ್ಭದಲ್ಲಿ ಜೀವ ಕಳೆದುಕೊಂಡಲ್ಲಿ ಅಥವಾ ಗಾಯಗೊಂಡಲ್ಲಿ 10 ಲಕ್ಷ ರೂ.ಗಳವರೆಗೆ ಪರಿಹಾರ ಪಡೆದುಕೊಳ್ಳಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

ತಾಲೂಕು ಅಂಚೆ ಸಹಾಯಕ ವೆಂಕಟರಮಣಪ್ಪ, ಪೋಸ್ಟ್ ಮಾಸ್ಟರ್ ಕರಗುಂದ ಸ್ವಾಮಿ, ಚಂದ್ರೇಗೌಡ ಸೇರಿ ಅಂಚೆ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net