ಅಂಚೆ ಇಲಾಖೆ ಮೂಲಕ ಆಹಾರ ಉತ್ಪನ್ನ ಮಾರಾಟ

bkt-24-7
ಬಾಗಲಕೋಟೆ ನಗರದ ಬಿವಿವಿ ಸಂಘದ ಮಿನಿ ಸಭಾಂಗಣದಲ್ಲಿ ಶುಕ್ರವಾರ ನೇಚರ್ ಜಾಗರಿ ಸಂಸ್ಥೆ, ಬಾಗಲಕೋಟೆ ಚೇಂಬರ್ ಆಫ ಕಾಮರ್ಸ್ ಸಹಯೋಗದಲ್ಲಿ ರೈತ ತಯಾರಿಸಿದ ಉತ್ಕ್ರಷ್ಠ ಉತ್ಪನ್ನವನ್ನು ಅಂಚೆ ಇಲಾಖೆ ಮುಖಾಂತರ ದೇಶಾದ್ಯಂತ ವಿತರಿಸುವ ಕಾರ್ಯಕ್ರಮಕ್ಕೆ ಸಂಸದ ಪಿ.ಸಿ.ಗದ್ದಿಗೌಡರ ಚಾಲನೆ ನೀಡಿದರು. ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಡಾ.ವೀರಣ್ಣ ಚರಂತಿಮಠ, ನೇಚರ್ ಜಾಗರಿ ಸಂಸ್ಥೆಯ ಸಂಗಮೇಶಗೌಡ ಪಾಟೀಲ, ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ತರ್ ಜನರಲ್ ಕರ್ನಲ್ ಸುಶಿಲಕುಮಾರ, ಅಂಚೆ ನಿರ್ದೇಶಕಿ ವ್ಹಿ,ತಾರಾ ಇದ್ದರು.
Published on

ಬಾಗಲಕೋಟೆ: ರೈತರು ಬೆಳೆದ ಅಹಾರ ಉತ್ಪನ್ನಗಳನ್ನು ದೇಶ ವಿದೇಶಕ್ಕೆ ಸುಲಭ ರಿತಿಯಲ್ಲಿ ಅಂಚೆ ಇಲಾಖೆ ಮೂಲಕ ವಿತರಿಸಲು ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿಗೊಳಿಸಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ನಗರದ ಬಿವಿವಿ ಸಂಘದ ಮಿನಿ ಸಭಾಂಗಣದಲ್ಲಿ ಶುಕ್ರವಾರ ನೇಚರ್ ಜಾಗರಿ ಸಂಸ್ಥೆ, ಬಾಗಲಕೋಟೆ ಚೇಂಬರ್ ಆಫ್ ಕಾಮರ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿಗಳ ಕಿರು ಅಹಾರ ಸಂಸ್ಕರಣ ಉದ್ದಿಮೆಗಳ ನಿಯಮ ಬದ್ಧಗೊಳಿಸುವುಕೆ ಯೋಜನೆಯಡಿಯಲ್ಲಿ ರೈತ ತಯಾರಿಸಿದ ಉತ್ಕ್ರಷ್ಠ ಉತ್ಪನ್ನವನ್ನು ಅಂಚೆ ಇಲಾಖೆ ಮುಖಾಂತರ ದೇಶಾದ್ಯಂತ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಂಪ್ರದಾಯಕ ಕೃಷಿ ಪದ್ಧತಿ ಅನುಸರಣೆ ಅಗತ್ಯವಾಗಿದೆ. ಅಂಚೆ ಇಲಾಖೆಯಿಂದ ಪತ್ರ ವ್ಯವಹಾವಲ್ಲದೆ ರೈತ ಬೆಳೆದಂತಹ ಅಹಾರ ಉತ್ಪನ್ನಗಳನ್ನು ದೇಶ ವಿದೇಶಗಳಿಗೆ ಸುರಕ್ಷಿತವಾಗಿ ಸುಲಭ ರೀತಿಯಲ್ಲಿ ಸಾಗಾಣಿಕೆ ಮಾಡಬಹುದಾಗಿದೆ. ಇದು ನಮ್ಮ ಹೆಮ್ಮೆಯ ಕೇಂದ್ರ ಇಲಾಖೆಗಳಲ್ಲಿ ಒಂದು ರೈತರ ಆರ್ಥಿಕ ಅಭಿವೃದ್ಧಿ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಯೆ ನಮ್ಮ ಮೂಲ ಮಂತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಮುಂದಾಲೋಚನೆಯಿಂದ ಜಗತ್ತಿನ ಅರ್ಥ ವ್ಯವಸ್ಥೆಯಲ್ಲಿ ೫ ಸ್ಥಾನದಲ್ಲಿರುವ ಭಾರತ ೩ ಸ್ಥಾನಕ್ಕೆ ಆಗಮಿಸುವಲ್ಲಿ ಯಾವುದೆ ಸಂಶಯವಿಲ್ಲ ಎಂದು ಹೇಳಿದರು.

ಬಿವಿವಿ ಸಂಘಧ ಕಾರ್ಯಾಧ್ಯಕ್ಷ, ಚೇಂಬರ್ ಆಫ ಕಾಮರ್ಸ್ ಅಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಗ್ರಾಮಗಳ ಅಭಿವೃದ್ಧಿಯಲ್ಲಿ ದೇಶದ ಪ್ರಗತಿ ಹೊಂದಿದೆ. ಪ್ರಧಾನಿ ಮೋದಿಯವರ ಕನಸಿನ ಯೋಜನೆಯಾದ ಒಂದು ಜಿಲ್ಲೆ ಒಂದು ಉತ್ಪನ್ನದ ಯೋಜನೆಯಡಿಯಲ್ಲಿ ದೇಶದ ಎಲ್ಲಾ ೭೬೫ ಜಿಲ್ಲೆಗಳಲ್ಲಿ ರೈತರ ಉತ್ಪನ್ನಗಳ ರಫ್ತು ಸಾಮರ್ಥ್ಯವನ್ನು ಹೆಚ್ಚಿಸಲು ಅಂಚೆ ಇಲಾಖೆ ಮೂಲಕ ದೇಶಾದ್ಯಂತ ಅಹಾರ ವಿತರಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನಿಯವಾಗಿದೆ. ಇದರಿಂದ ರೈತರಿಗೆ ತ್ವರಿತಗತಿಯಲ್ಲಿ, ಸುರಕ್ಷಿತವಾಗಿ, ಕೆಟ್ಟು ಹೋಗದಂತೆ ಜಾಗೃತಿ ವಹಿಸುವುದು ಮುಖ್ಯವಾಗಿದೆ. ಅಂಚೆ ಇಲಾಖೆ ಜನ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ ಎಂದರು.

ನೇಚರ್ ಜಾಗರಿ ಸಂಸ್ಥೆಯ ಸಂಗಮೇಶಗೌಡ ಪಾಟೀಲ, ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ತರ್ ಜನರಲ್ ಕರ್ನಲ್ ಸುಶಿಲಕುಮಾರ, ಅಂಚೆ ನಿರ್ದೇಶಕಿ ವ್ಹಿ,ತಾರಾ, ಅಂಚೆ ಇಲಾಖೆ ಅಧಿಕ್ಷಕ ಎಚ್.ಬಿ.ಹಸಬಿ, ವಿಜಯ ಕೋರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net