ಅಂಗವಿಕಲರು ಸ್ವಾಭಿಮಾನಿಗಳು

bkt-3-4
ಬಾಗಲಕೋಟೆ ನವನಗರದ ಕಲಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು.
Published on

ಬಾಗಲಕೋಟೆ: ಹುಟ್ಟಿನಿಂದಲೇ ಅಂಗವೈಕಲ್ಯ ಹೊಂದಿದ ವ್ಯಕ್ತಿಗಳಲ್ಲಿ ಅಗೋಚರವಾದ ಶಕ್ತಿ ಇದ್ದು, ಅದರಿಂದಾಗಿ ಪರರ ಸಹಾಯವಿಲ್ಲದೇ ತಮ್ಮ ಕಾರ್ಯಗಳನ್ನು ತಾವೇ ನಿರ್ವಹಿಸಿಕೊಂಡು ಸ್ವಾಭಿಮಾನಿಗಳಾಗಿದ್ದಾರೆ ಎಂದು ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ ಹೇಳಿದರು.

ನವನಗರದ ಕಲಾ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು, ಕ್ಷೇಮಾಭಿವೃದ್ಧಿ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೆಲವೊಂದು ಕಾರಣಗಳಿಂದ ಅಂಗ ವೈಕಲ್ಯದಿಂದ ಹುಟ್ಟಿದ್ದರೂ ಸಹ ದೇವರು ಅವರಿಗೆ ವಿಶೇಷ ಶಕ್ತಿಯನ್ನು ಕೊಟ್ಟಿರುತ್ತಾನೆ. ಯಾವುದೇ ಒಂದು ಕೊರತೆ ಇದೇ ಎಂದರೆ ಅದರ ಜೊತೆಗೆ ಇನ್ನೊಂದು ಶಕ್ತಿ ಇರುತ್ತದೆ. ಒಂದು ಕೈ ಇಲ್ಲವಾದರೆ ಎರಡು ಕೈಗಳ ಶಕ್ತಿ ಒಂದೇ ಕೈಗೆ ದೇವರು ಕೊಟ್ಟಿರುತ್ತಾನೆ. ದೌರ್ಬಲ್ಯಕ್ಕೆ ಮತ್ತೊಂದು ಶಕ್ತಿ ಇದ್ದೇ ಇರುತ್ತದೆ. ಇದಕ್ಕೆ ನಿರ್ದಶನ ಗದುಗಿನ ಗಾನಯೋಗಿಗಳಾದ ಪಂಚಾಕ್ಷರಿ ಹಾಗೂ ಪುಟ್ಟರಾಜ ಗವಾಯಿಗಳು ಹುಟ್ಟುಕುರುಡು ಆಗಿದ್ದರೂ ಅವರ ಸಾಧನೆಗೈಯುವದಲ್ಲದೇ ನಾಡಿನ ಅನೇಕ ಅಂದ ಕಲಾವಿದರನ್ನು ನಾಡಿಗೆ ನೀಡುವ ಕಾರ್ಯ ಮಾಡಿದ್ದಾರೆ ಎಂದರು.

ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಮಾತನಾಡಿ, ನಮ್ಮ ದೇಶದಲ್ಲಿ ಅಂಗವಿಕಲರ ಸಂಖ್ಯೆ ನೋಡಿದಾದ ೨.೮೬ ಕೋಟಿ ಹಾಗೂ ರಾಜ್ಯದಲ್ಲಿ ೧೩.೨೪ ಲಕ್ಷ ಜನಸಂಖ್ಯೆ ಇದೆ. ಇಂದು ಅಂಗವಿಕಲರು ಸಮಾನ್ಯ ಜನರಂತೆ ನಾವು ಕೂಡಾ ಸ್ವಾವಲಂಬಿಗಳಾಗಿ ಬದುಕು ಸಾಗಿಸುತ್ತಿರುವದನ್ನು ನಾವು ನೋಡುತ್ತಿದ್ದೇವೆ. ಭಗವಂತ ಎಲ್ಲರಿಗೂ ಒಂದೊಂದು ರೀತಿಯ ಶಕ್ತಿ ಕೊಟ್ಟಿರುತ್ತಾನೆ. ಅದೇ ರೀತಿಯ ವಿಕಲಾಂಗವಾಗಿದ್ದರೂ ಅದಕ್ಕೆ ಪೂರಕವಾಗಿ ಮತ್ತೊಂದು ವಿಶೇಷ ಶಕ್ತಿ ಸಹ ಕೊಟ್ಟಿರುತ್ತಾನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಂಗವಿಕಲರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ವಿವಿಧ ಕ್ರೀಡೆಗಳಲ್ಲಿ ವಿಚೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಅಂಗವಿಕಲರನ್ನು ಸನ್ಮಾನಿಸಲಾಯಿತು. ಪೂರ್ಣನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕಣ್ಣವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಕೆ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುನಾಥ ಡೂಗನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಜಿಲ್ಲಾ ವಿಕಲಚೇತನ ಕಲ್ಯಾಣಾಽಕಾರಿ ಮಹಾಂತೇಶ, ನಿವೃತ್ತ ಅಧಿಕಾರಿ ಎಸ್.ಎಸ್.ಬೆಳಗಲಿ, ಅಂಗವಿಕಲರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳಾದ ರಾಜು ತೇರದಾಳ, ಪರಶುರಾಮ ತೆಗ್ಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮ ಪೂರ್ವದಲ್ಲಿ ಜಿಲ್ಲಾಡಳಿತ ಭವನದಿಂದ ಪುಟ್ಟರಾಜ ಗವಾಯಿಗಳ ಭಾವಚಿತ್ರದ ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net