

ಅರಸೀಕೆರೆ: ಅಂಗವಿಕಲರ ಕಲ್ಯಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಸವಲತ್ತುಗಳನ್ನು ಕಲ್ಪಿಸಿದ್ದು, ಅರ್ಹರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಸಲಹೆ ನೀಡಿದರು.
ನಗರಸಭೆ ಕಚೇರಿಗೆ ಹೊಂದಿಕೊಂಡ ಇಂಜಿನಿಯರಿಂಗ್ ವಿಭಾಗದ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಅಂಗವಿಕಲರಿಗೆ ಮಾಸಾಶನ, ವಿದ್ಯಾರ್ಥಿವೇತನ, ರೈಲು, ಬಸ್‌ಪಾಸ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಲು ಯೂನಿಕ್ (ಯುಡಿಐಡಿ)ಗುರುತಿನ ಚೀಟಿ ವಿತರಣೆ ಮಾಡುತ್ತಿದೆ. ನ್ಯೂನತೆ ಹೊಂದಿದ್ದು, ಐಡಿ ಕಾರ್ಡ್ ಪಡೆಯದಿದ್ದರೆ ಸವಲತ್ತುಗಳಿಂದ ವಂಚಿತರಾಗುವ ಸಾಧ್ಯತೆಯಿದೆ. ಆದ್ದರಿಂದ ತಕ್ಷಣವೇ ಸಮೀಪದ ಅಂಗನವಾಡಿ ಅಥವಾ ಆಶಾಕಾರ್ಯರ್ತೆಯರ ಬಳಿ ಮಾಹಿತಿ ಪಡೆದು ಕಾರ್ಡ್ ಪಡೆಯಬೇಕು ಎಂದು ತಿಳಿಸಿದರು.
ಪೌರಾಯುಕ್ತ ಕೃಷ್ಣಮೂರ್ತಿ ಮಾತನಾಡಿ, ಯುಡಿಐಡಿ ಕಾರ್ಡ್ ಪಡೆದುಕೊಂಡಲ್ಲಿ ಹೆಚ್ಚಿನ ಅನುಕೂಲವಾಗಲಿದೆ. ಜತೆಗೆ ನಗರಸಭೆಯಿಂದ ದೊರೆಯುವ ಸವಲತ್ತುಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಸಂಘಟಕ ಜುಬೇರ್ ಪಾಷಾ, ನಗರಸಭೆ ಸದಸ್ಯ ಮೇಲುಗಿರಿಗೌಡ, ಸಂಪನ್ಮೂಲ ವ್ಯಕ್ತಿ ಪುನೀತ್ ಇತರರು ಇದ್ದರು.