ಅಂಗವಿಕಲರಿಗೆ ಅವಕಾಶ ವಿಫುಲಗೊಳ್ಳಲಿ

bkt-1-2.
ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಅಂಗವಿಕಲರ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಂಗವಿಕಲರ ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಉದ್ಘಾಟಿಸಿದರು.
Published on

ಬಾಗಲಕೋಟೆ: ಅಂಗವಿಕಲರಿಗೆ ವಿಶೇಷವಾದ ಚತನ್ಯವಿದೆ. ಅವರಿಗೆ ಎಲ್ಲ ರಂಗದಲ್ಲಿಯೂ ಸೇವೆ ಮಾಡುವ ಶಕ್ತಿ ಇದೆ. ಹಾಗೇ ರಾಜಕೀಯ ಕ್ಷೇತ್ರದಲ್ಲಿಯೂ ವಿಫಲ ಅವಕಾಶಗಳು ದೊರೆಯಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅಂಗವಿಕಲರ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಂಗವಿಕಲರ ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಅಂಗವಿಕಲರ ಕೂಡ ನಾಡಿನ ನಾಯಕರಾಗಬೇಕು ಎಂಬುದು ನನ್ನ ಕನಸಾಗಿದೆ. ಈ ನಿಟ್ಟಿನಲ್ಲಿ ಅಂಗವಿಕಲರು ಇಂದಿನಿಂದಲೇ ರಾಜಕಾರಣದಲ್ಲಿ ಆಸಕ್ತಿ ವಹಿಸಿಕೊಂಡು ತಮಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಂತೆ ಮೀಸಲಾತಿ ನೀಡಬೇಕು ಅಂತ ರಾಜ್ಯಪಾಲರಿಗೆ ರಾಷ್ಟçಪತಿಗಳಿಗೆ ಒತ್ತಾಯಿಸಬೇಕು. ಅಂಗವಿಕಲರು ರಾಜಕಾರಣಕ್ಕೆ ಬರಬೇಕು. ಅದಕ್ಕೆ ನಮಗೂ ಟಿಕೆಟ್ ನೀಡಿ ನಾವೂ ಗೆಲ್ಲುತ್ತೇವೆ ಎಂಬ ಬೇಡಿಕೆ ಇಡಬೇಕು. ನಿಮ್ಮ ಹಕ್ಕುಗಳನ್ನು ಪಡೆಯಲು ರಾಜ್ಯ, ರಾಷ್ಟç ನಾಯಕರಾಗಬೇಕು ಎಂದರು.

ಈ ಹಿಂದೆ ರಾಜೀವ ಗಾಂಧಿ, ಪಿ.ವಿ.ನರಸಿಂಹರಾವ್ ಅವರು ಪ್ರಧಾನ ಮಂತ್ರಿ ಆಗಿದ್ದಂತಹ ಸಂದರ್ಭದಲ್ಲಿ ಆಂಧ್ರಪ್ರದೇಶದ ಜೈಪಾಲ್ ರೆಡ್ಡಿ ವ್ಹೀಲ್ ಚೇರ್ ಮೇಲೆ ಓಡಾಡಿಯೇ ಅಂದಾಜು ೨೫-೩೦ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ಹಲವು ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ಅದೇ ರೀತಿ ಬಾಗಲಕೋಟೆ ಅಂಗವಿಕಲರು ಕೂಡಾ ರಾಜಕೀಯ ಕ್ಷೇತ್ರದಲ್ಲಿ ಮಿಂಚುವಂತಾಗಬೇಕು ಎಂದು ಹೇಳಿದರು.

ಕೈ, ಕಾಲು, ಕಣ್ಣು ಎಲ್ಲ ಅಂಗಾಗಗಳು ಸರಿಯಾಗಿ ಇದ್ದರೂ ಎಷ್ಟೋ ಜನರು ತಮ್ಮ ಜೀವನ ವ್ಯರ್ಥವಾಗಿ ಕಳೆದವರು ಇದ್ದಾರೆ. ಅವರನ್ನು ಅಂಗವಿಕಲರು ಎನ್ನಬೇಕಾಗುತ್ತದೆ. ನಿಮ್ಮ ವಿಕಲತೆಯನ್ನು ಮರೆಮಾಚಿ ಧೈರ್ಯದಿಂದ ಮುನ್ನುಗ್ಗಲು ಛಲ ತೊಟ್ಟಲ್ಲಿ ಸಾಧನೆಯ ದಾರಿ ಸರಳವಾಗಿರುತ್ತದೆ. ಇತರ ಕ್ರೀಡಾಪಟುಗಳಿಗಿಂತ ಅಂಗವಿಕಲ ಕ್ರೀಡಾಪಟುಗಳು ಪ್ಯಾರಾ ಒಲಂಪಿಕ್ ನಲ್ಲಿ ಭಾಗವಹಿಸಿ ೨೯ ಕ್ರೀಡೆಗಳಲ್ಲಿ ಈ ದೇಶದ ಕೀರ್ತಿ ಪತಾಕಿಯನ್ನು ಹಾರಿಸಿರುವುದು ಹೆಮ್ಮಯ ಸಂಗತಿ ಎಂದು ತಿಳಿಸಿದರು.

ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಅಂಗವಿಕಲರಿಗೆ ಅನುಕಂಪ ಅಥವಾ ಅಯ್ಯೋ ಪಾಪ ಎನ್ನುವ ಭಾವನೆ ತೋರದೆ ಅವಕಾಶ ನೀಡುವ ಕೆಲಸವಾಗಬೇಕಾಗಿದೆ. ಅಂಗವಿಕಲರು ದೇವರು ವಿಶೇಷವಾದ ಶಕ್ತಿಯನ್ನು ನೀಡಿರುತ್ತಾನೆ ಎಂಬ ನಂಬಿಕೆ ಇದೆ. ದೇವರು ನೀಡಿರುವಂತಹ ಸಂಗೀತ, ಚಿತ್ರಕಲೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ರಾಜ್ಯ ರಾಷ್ಟಮಟ್ಟದ ಕಲಾವಿದರಾಗಿ ಬಲಿಷ್ಠರಾಗಬೇಕು ಎಂದರು.

ಜಿ.ಪಂ ಸಿಇಒ ಶಶಿಧರ ಕುರೇರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಭಾಕರ ಕವಿತಾಳ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಹಾಂತೇಶ ಕುರಿ, ಅಂಗವಿಕಲರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ರಾಜು ತೇರದಾಳ, ಕಾರ್ಯದರ್ಶಿ ರಘು ಹುಬ್ಬಳ್ಳಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net