

ಬಾಗಲಕೋಟೆ: ಅಂಗವಿಕಲ ನೌಕರರಿಗೆ ಜನ ಸ್ನೇಹಿ ವಾತಾವರಣ ನಿರ್ಮಿಸಬೇಕು, ಮುಂಬಡ್ತಿ ಹಾಗೂ ಮೂಲ ಸೌಕರ್ಯ ಕಚೇರಿಯಲ್ಲಿ ಒದಗಿಸಬೇಕು ಎಂದು ಆಗ್ರಹಿಸಿ ಸರ್ಕಾರಿ ಅಂಗವಿಕಲರ ನೌಕರರ ಸಂಘದ ನೇತೃತ್ವದಲ್ಲಿ ಅಂಗವಿಕಲ ನೌಕರರು ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ನೌಕರರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಏಳನೇ ವೇತನ ಶಿಫಾರನಂತೆ ಶೇ.೬ ರಷ್ಟು ರಾಜ್ಯ ಸರ್ಕಾರಿ ಅಂಗವಿಕಲ ನೌಕರರಿಗೆ ಪ್ರಯಾಣ ಭತ್ಯೆ ಆದೇಶ ಕೂಡಲೇ ಹೊರಡಿಸಬೇಕು, ಸರ್ವೋಚ್ಛ ನ್ಯಾಯಾಲಯ ತೀರ್ಪಿನಂತೆ ಅಂಗವಿಕಲ ನೌಕರರಿಗೆ ಕೇಂದ್ರ ಸರ್ಕಾರದು ಎ,ಬಿ, ಸಿ. ಡಿ ವೃಂದದ ಹುದ್ದೆಗಳಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿದ ರೀತಿ ರಾಜ್ಯದಲ್ಲಿಯೂ ಮೀಸಲಾತಿ ಕಲ್ಪಿಸಬೇಕು, ಅಂಗವಿಕಲ ವಿದ್ಯಾವಂತರನ್ನು ಬ್ಯಾಕ್ ಲಾಕ್ ಹುದ್ದೆಗಳಿಗೆ ವಿವಿಧ ಇಲಾಖೆಗಳಲ್ಲಿ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಶಕ್ತಿ ಯೋಜನೆ ಮಾದರಿಯಲ್ಲಿ ಅಂಗವಿಕಲರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು. ರಾಜ್ಯದಲ್ಲಿ ಅಂಗವಿಕಲರ ಸಬಲೀಕರಣಕ್ಕೆ ಅಂಗವಿಕಲರ ನಿಗಮ ಸ್ಥಾಪಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳುವ ವಿವಿಧ ಕಾರ್ಯಕ್ರಮಗಳಲ್ಲಿ ಶೇ.೫ ಅನುದಾನ ಅಂಗವಿಕಲ ಕಲಾವಿದರ ಸಂಸ್ಥೆಗಳಿಗೆ ಮೀಸಲಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ರಮೇಶ ಆಲಗುಂಡಿ, ಉಪಾಧ್ಯಕ್ಷ ಜಗದೀಶ ಮೇತ್ರಿ, ದ್ಯಾಮಣ್ಣ ಬೆಲ್ಲದಡಿ, ಎಚ್.ಎಂ.ನಾಯಕ, ಬಸವರಾಜ ಕಾತರಕಿ, ಬಸಪ್ಪ ಮುಳ್ಳೂರ ಇತರರು ಇದ್ದರು.