ಅಂಕೋಲಾದಲ್ಲಿ ಸುಗ್ಗಿ ಕುಣಿತ ನಾಡಿದ್ದು

6ankola1c
Published on

ಅಂಕೋಲಾ: ಹೋಳಿ ಹುಣ್ಣಿಮೆ ನಿಮಿತ್ತ ಮಾ. 9ರಂದು ಪಟ್ಟಣದಲ್ಲಿ ಬೆಳಂಬಾರ ತಂಡದವರಿಂದ ವಿವಿಧ ಹಗಣ ಜತೆಗೆ ಸುಗ್ಗಿ ಕುಣಿತ ಪ್ರದರ್ಶನಗೊಳ್ಳಲಿದೆ.

ಸುಗ್ಗಿ ಹಬ್ಬ ಎಂದ ಕೂಡಲೆ ಸಹಜವಾಗಿ ಉತ್ತರ ಕನ್ನಡ ಜಿಲ್ಲೆ ನೆನಪಾಗುತ್ತದೆ. ಸುಗ್ಗಿಯನ್ನು ಹೆಚ್ಚಿನದಾಗಿ ಹಾಲಕ್ಕಿಗಳೇ ಮುನ್ನಡೆಸಿಕೊಂಡು ಬರುತ್ತಿದ್ದು, ಅಪರೂಪಕ್ಕೆ ಮಾತ್ರ ಇತರ ಜನಾಂಗದವರು ಸುಗ್ಗಿ ಕಟ್ಟುತ್ತಾರೆ. ಕೋಮಾರಪಂಥ ಸಮಾಜದವರು, ನಾಮಧಾರಿ ಸಮಾಜದವರು ಎರಡು ವರ್ಷ ಅಥವಾ ಐದು ವರ್ಷಕ್ಕೊಮ್ಮೆ ಸುಗ್ಗಿ ಕುಣಿದರೆ, ಹಾಲಕ್ಕಿಗಳು ಮಾತ್ರ ಪ್ರತಿ ವರ್ಷವೂ ಸುಗ್ಗಿ ಕಟ್ಟುವ ಮೂಲಕ ಸಾಂಪ್ರದಾಯಿಕ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ.

ಪ್ರತಿವರ್ಷ ಸುಗ್ಗಿ ತಂಡವು ತಾಲೂಕು ಕಚೇರಿಗೆ ಬಂದು ಪ್ರದರ್ಶನ ನೀಡುತ್ತದೆ. ಅಲ್ಲದೆ, ವರ್ಷದಲ್ಲಿ ನಡೆದ ಲೋಪದೋಷಗಳ ಬಗ್ಗೆ ಹಗಣದ ಮೂಲಕ ಅನಾವರಣಗೊಳಿಸುತ್ತಾರೆ. ನಂತರ ತಾಲೂಕು ದಂಡಾಧಿಕಾರಿಗಳು ತಾಮ್ರದ ಫಲಕ ಹಾಗೂ ಗೌರವಧನ ನೀಡಿ ಸುಗ್ಗಿ ತಂಡವನ್ನು ಗೌರವಿಸುತ್ತಾರೆ. ಈ ಸುಗ್ಗಿ ತಂಡದೊಂದಿಗೆ ವಿಶೇಷವಾಗಿ ಕರಡಿ ವೇಷಧಾರಿಗಳು ಗಮನ ಸೆಳೆಯುತ್ತಾರೆ. ಈ ಕರಡಿಯನ್ನು ಸುಗ್ಗಿಯ ರಕ್ಷಕ ಎಂತಲೂ ಕರೆಯಲಾಗುತ್ತಿದ್ದು, ಪ್ರದರ್ಶನ ವೀಕ್ಷಿಸಲು ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಜನ ಬರುತ್ತಾರೆ.

ಸುಗ್ಗಿ ಕುಣಿತ ಇಂದಿನಿಂದ

ಜೊಯಿಡಾ: ಸುಗ್ಗಿ ಹಬ್ಬದ ಪ್ರಯುಕ್ತ ತಾಲೂಕಿನ ಗುಂದ ಗ್ರಾಮದ ಕುಣಬಿ ತಂಡದವರು ಗ್ರಾಮ ದೇವರಿಗೆ ಶುಕ್ರವಾರ ಪೂಜೆ ಸಲ್ಲಿಸಿದರು. ಶನಿವಾರದಿಂದ ವಿವಿಧ ಗ್ರಾಮಗಳಲ್ಲಿ ಸುಗ್ಗಿ ಕುಣಿತ ಪ್ರದರ್ಶನಗೊಳ್ಳಲಿದೆ. ಮನೆಮನೆಗೆ ತೆರಳಿ ‘ಸೈನಕೊಲೆ ಮತಿನ ಬೊಲೆ’ ಎನ್ನುವ ಕೊಂಕಣಿ ಹಾಡಿಗೆ ಕುಣಿಯುವ ತಂಡಕ್ಕೆ ಗ್ರಾಮಸ್ಥರು ಊಟೋಪಹಾರ ನೀಡಿ ಸತ್ಕರಿಸುತ್ತಾರೆ. ಬಣ್ಣ ಬಣ್ಣದ ಬಟ್ಟೆ ಧರಿಸಿ ಶೃಂಗರಿಸಿಕೊಂಡ ಸುಗ್ಗಿ ಕುಣಿತದ ತಂಡಗಳು ಒಮ್ಮೆ ಧರಿಸಿದ ಬಟ್ಟೆಗಳನ್ನು ಮತ್ತೊಮ್ಮೆ ಬಳಸುವುದಿಲ್ಲ. ಹೋಳಿಯ ಸಂದರ್ಭದಲ್ಲಿ 5 ದಿನ ಊರ ಹೊರಗೆ ಇದ್ದು, ಸುಗ್ಗಿ ಕುಣಿಯುವುದು ವಿಶೇಷ. ಗುಂದದ ತಂಡ ತಾಲೂಕಿನ ಇತರ ಸುಗ್ಗಿ ತಂಡಕ್ಕಿಂತಲೂ ವಿಶಿಷ್ಟವಾಗಿದೆ. ತಾಲೂಕಿನ ತೆರಾಳಿ, ಕುಂಡಲ್, ಕೆಲೋಲಿ, ಕಾರಸಿಂಗಳ, ಪಾಟ್ನೆ, ಭಾರಾಡೆ, ಶಿಸೈ, ಕುಶಾವಳಿ ತಂಡಗಳು ಬೇರೆ ಬೇರೆ ಗ್ರಾಮಗಳಲ್ಲಿ ಮಾ. 7 ರಿಂದ ಸುಗ್ಗಿ ಕುಣಿಯುವುದು ವಿಶೇಷವಾಗಿದೆ.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net