

ಬಾಗಲಕೋಟೆ: ಬೀಳಗಿ ತಾಲೂಕಿನ ಕುಂದರಗಿ ಗ್ರಾಮದ ಸುರಗಿರಿ ಬೆಟ್ಟದಲ್ಲಿರುವ ಭುವನೇಶ್ವರಿ ದೇವಿ ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ಅ.೩೧ರಂದು ಮಧ್ಯಾಹ್ನ ೨ ಗಂಟೆಗೆ ಅಂಬಾರಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಸ್ವಾಮೀಜಿ ಲಕ್ಷ್ಮಣ ಶರಣರು ಹೇಳಿದರು.
ಪ್ರತಿವರ್ಷ ದೇವಸ್ಥಾನದಲ್ಲಿ ವಾರ್ಷಿಕೋತ್ಸವದ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಭಾರಿ ಗ್ರಾಮಸ್ಥರ ಅಪೇಕ್ಷೆಯಂತೆ ಹಾಗೂ ಅಮ್ಮನವರ ಆಶೀರ್ವಾದದಿಂದ ಭುವನೋತ್ಸವ ಮತ್ತು ಅಂಬಾರಿ ಉತ್ಸವ ಏರ್ಪಡಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ.೩೦ ರಂದು ಉಡಿ ತುಂಬುವುದು ಹಾಗೂ ನವೆಂಬರ್ ೧ ರಂದು ಲಕ್ಷ ದೀಪೋತ್ಸವ ಕಾರ್ಯಕ್ರಮ ಭುವನೇಶ್ವರಿ ದೇವಸ್ಥಾನದಲ್ಲಿ ಜರುಗಲಿದೆ. ಅಂಬಾರಿ ಉತ್ಸವದಲ್ಲಿ ಜಿಲ್ಲೆಯ ವಿವಿಧ ಕಲಾತಂಡಗಳು ಸಹ ಭಾಗವಹಿಸಲಿವೆ. ಕುಂದರಗಿ ಗ್ರಾಮದಿಂದ ಮುತೈದೆಯರ ಆರುತಿ, ಸಕಲ ವಾದ್ಯಗಳೊಂದಿಗೆ ಭುವನೇಶ್ವರಿ ದೇವಿಯನ್ನು ಅಂಬಾರಿ ಮೇಲೆ ಮೆರವಣಿಗೆ ನಡೆಸಲಾಗುವುದು. ಗ್ರಾಮದ ಹಾಗೂ ಜಿಲ್ಲೆಯ ವಿವಿಧ ಭಾಗದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವರು ಎಂದು ತಿಳಿಸಿದರು.
ಹಿರಿಯ ನಟ ದೊಡ್ಡಣ್ಣ, ಜಿಲ್ಲೆಯ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ತಿಳಿಸಿದರು.
ಮುಖಂಡರಾದ ಡಿ.ಎಂ.ಸಾಹುಕಾರ, ರಾಮಣ್ಣ ಮುಕ್ಕಣ್ಣವರ, ರಮೇಶ ಶಿರಗುಪ್ಪಿ, ಬಸವರಾಜ ನಿರಾಕಾಣಿ ಇದ್ದರು.