

ಬಾಗಲಕೋಟೆ: ನಿವೃತ್ತ ಸರ್ಕಾರಿ ನೌಕರರಿಗೆ ೭ ನೇ ವೇತನ ಆಯೋಗದ ಲೆಕ್ಕಾಚಾರದ ಅನುಸಾರ ಡಿ.ಸಿ.ಆರ್.ಜಿ. ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣಗಳ ನಿವೃತ್ತಿ ಆರ್ಥಿಕ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅ.೧ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ನೌಕರರ ವೇದಿಕೆಯ ಸಂಚಾಲಕ ವಿ.ಎಸ್.ಪತ್ತಾರ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿವೃತ್ತ ನೌಕರರು ಕಪ್ಪು ಪಟ್ಟಿ ಧರಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದರು.
ಜು. ೦೧-೦೭-೨೦೨೨ ರಿಂದ ೩೧-೭-೨೦೨೪ ರ ಅವಽಯಲ್ಲಿ ನಿವೃತ್ತಿಯಾದ ನೌಕರರಿಗೆ ೬ ನೇ ವೇತನ ಆಯೋಗದ ಲೆಕ್ಕಾಚಾರದ ಅನುಸಾರ ಡಿ.ಸಿ .ಆರ್.ಜಿ. ಕಮ್ಯುಟೇಶನ್, ಗಳಿಕೆ ರಜೆ ನಗಧೀಕರಣಗಳ ನಿವೃತ್ತಿ ಆರ್ಥಿಕ ಸೌಲಭ್ಯವನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ನಮಗೆ ಆರ್ಥಿಕ ನಷ್ಟವುಂಟಾಗಿ ಅನ್ಯಾಯವಾಗಿದೆ. ಡಿ ಗ್ರುಫ್ ದಿಂದ ಕ್ಲಾಸ್ ೧ ಅಧಿಕಾರಿಗಳವರೆಗೆ ಕನಿಷ್ಠ ೬ ರಿಂದ ೨೦ ಲಕ್ಷ ರೂ.ವರೆಗೆ ನಮಗೆ ಆರ್ಥಿಕ ನಷ್ಟವಾಗಿದೆ ಎಂದು ತಿಳಿಸಿದರು.
ರಾಜ್ಯದಾದ್ಯಂತ ಏಕಕಾಲಕ್ಕೆ ಸರ್ವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಅ.೧ ವಿಶ್ವ ನಾಗರಿಕರ ದಿನಾಚರಣೆಯ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಅರ್ಪಿಸಲಿದ್ದೇವೆ ಎಂದು ತಿಳಿಸಿದರು.
ನಿವೃತ್ತ ನೌಕರ ಎ.ಆರ್.ನಡುವಿನಮನಿ, ವಿ.ಎಸ್. ಮಾಡಪಾಳ, ಎಸ್.ಆರ್. ವಿಠ್ಠಲಗೋಳ, ಎಸ್.ಎನ್.ಶಿರೋಳ, ವಿ.ಆರ್.ಮಸ್ಕಿ ಇತರರು ಇದ್ದರು.