ಜಿಪಂ ಸಿಇಒ ಬೆನ್ನಿಗೆನಿಂತ ಪಿಡಿಒಗಳು

ZP_CEO_PDO
Published on

ತುಮಕೂರು: ಜಿಲ್ಲಾ ಪಂಚಾಯತ್​ ಸಿಇಒ ಜಿ.ಪ್ರಭು ವ್ಯಕ್ತಿತ್ವಕ್ಕೆ ಕುಂದು ತರುವ ಮೂಲಕ ಅವರಿಗೆ ಮಸಿ ಬಳಿಯುವ ಪ್ರಯತ್ನ ನಡೆಸುತ್ತಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಗ್ರಾಪಂ ಪಿಡಿಒ ಸಂಘಗಳ ಪದಾಧಿಕಾರಿಗಳ ನಿಯೋಗವು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖಾ ಎಸ್ಸಿ, ಎಸ್ಟಿ ಅಧಿಕಾರಿ, ನೌಕರರ ಸಂ, ರಾಜ್ಯ ಪಂಚಾಯತ್​ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಅಧಿಕಾರಿ/ನೌಕರರ ಸಂದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಶುಭಕಲ್ಯಾಣ್​ರನ್ನು ಭೇಟಿ ಮಾಡಿ, ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಸಿಇಒ ಅವರನ್ನು ದಲಿತ ವಿರೋಧಿ ಎಂಬಂತೆ ಬಿಂಬಿಸುತ್ತಿದ್ದು ಇದರ ಹಿಂದೆ ಪ್ರಭಾವಿಗಳು ಹಾಗೂ ನಮ್ಮದೇ ಇಲಾಖೆಯ ಕೆಲ ಹೊರಗುತ್ತಿಗೆ ನೌಕರರ ಕೈವಾಡ ಇರುವ ಗುಮಾನಿ ಇರುತ್ತದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಕ್ರಮ ಕೈಗೊಂಡಿದ್ದೇ ತಪ್ಪೇ : ನರೇಗಾ ಯೋಜನೆ ಸಮರ್ಪಕ ಅನುಷ್ಠಾನ ವೇಳೆ ತೀವ್ರತರವಾದ ಕರ್ತವ್ಯಲೋಪ ಎಸಗಿದವರಿಗೆ ಎಚ್ಚರಿಕೆಯ ನೋಟೀಸ್​ಗಳನ್ನು ನೀಡಿದ್ದು ಅವರು ತಿದ್ದಿಕೊಳ್ಳದೇ ಇದ್ದಾಗ ಅಂತಹ ಕರ್ತವ್ಯಲೋಪ ಎಸಗಿದ್ದವರ ವಿರುದ್ಧ ಅಮಾನತ್ತಿನಂತಹ ಶಿಸ್ತು ಕ್ರಮ ಕೈಗೊಂಡಿದ್ದೇ ಸಿಇಒ ಜಿ.ಪ್ರಭು ಅವರಿಗೆ ಮುಳುವಾಗಿದೆ. ಈ ವೇಳೆ ಅಧಿಕಾರಿ ಅಥವಾ ನೌಕರನ ಧರ್ಮ, ಜಾತಿಯನ್ನು ಪರಿಗಣಿಸದೆ ಕ್ರಮ ಕೈಗೊಂಡಿದ್ದು ಅವರಿಗೆ ದಲಿತ ವಿರೋಧಿ ಪಟ್ಟ ಕಟ್ಟಿರುವುದರ ಹಿಂದೆ ಪ್ರಭಾವಿಗಳ ಕೈವಾಡವಿದೆ ಎಂದು ಪಿಡಿಒಗಳ ನಿಯೋಗ ದೂರಿದೆ.

ಇದೇ ಅವಧಿಯಲ್ಲಿ ಆಡಳಿತವನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಕರ್ತವ್ಯ ಲೋಪವೆಸಗಿರುವ ಬಗ್ಗೆ ಶಿಸ್ತಕ್ರಮ ಕೈಗೊಂಡಿದ್ದಾರೆ. ಪಂಚಾಯತ್​ ರಾಜ್​ ಇಲಾಖೆಯ ಒಟ್ಟು 22 ಅಧಿಕಾರಿ/ನೌಕರರನ್ನು ಅಮಾನತು ಮಾಡಿದ್ದು ಇವರಲ್ಲಿ ಸಾಮಾನ್ಯ ವರ್ಗದ 14 ಜನ, ಪರಿಶಿಷ್ಟ ಪಂಗಡದ ಒಬ್ಬರು ಹಾಗೂ ಪರಿಶಿಷ್ಟ ಜಾತಿಯ 7 ಜನರನ್ನು ವಿವಿಧ ಕಾರಣಕ್ಕೆ ಅಮಾನತು ಶಿಕ್ಷೆಗೊಳಗಾಗಿದ್ದಾರೆ. ಅಮಾನತ್ತಾದ ಪರಿಶಿಷ್ಟ ಜಾತಿಯ ಏಳು ಮಂದಿ ಪೈಕಿ ಇಬ್ಬರು ಲೋಕಾಯುಕ್ತ ಟ್ರಾ$್ಯಪ್​ನಲ್ಲಿ ಸಿಲುಕಿರುತ್ತಾರೆ. ಇತ್ತೀಚೆಗೆ ಅಮಾನತುಶಿಕ್ಷೆಗೊಳಗಾದ ಇಬ್ಬರನ್ನು ಹೊರತುಪಡಿಸಿ ಉಳಿದ 20 ಅಧಿಕಾರಿ/ನೌಕರರಿಗೆ ಅಮಾನತು ತೆರವುಗೊಳಿಸಿ ಪುನರ್​ ಸ್ಥಳ ನಿಯುಕ್ತಿ ಮಾಡಿ ತಮ್ಮ ತಪ್ಪನ್ನು ತಿದ್ದಿಕೊಂಡು ಕಾರ್ಯನಿರ್ವಹಿಸಲು ಅವಕಾಶ ನೀಡಿರುತ್ತಾರೆ. ಅಲ್ಲದೆ, ನೌಕರರ ವಿರುದ್ಧದ ಇಲಾಖಾ ವಿಚಾರಣೆಯನ್ನು 2 ತಿಂಗಳೊಳಗೆ ಪೂರ್ಣಗೊಳಿಸಲು ಸಂಬಂಧಪಟ್ಟ ವಿಚಾರಣಾಧಿಕಾರಿಗಳಿಗೆ ಸಿಇಒ ಸೂಚಿಸಿರುವುದು ಆಡಳಿತವನ್ನು ಸರಿದಾರಿಗೆ ತರಲು ಕೈಗೊಂಡಿರುವ ಕ್ರಮವಷ್ಟೇ ಎಂದಿದ್ದಾರೆ.

ಇಲಾಖೆಯ ಸಭೆಗಳಲ್ಲಿ ಪ್ರಗತಿ ಕುಂಠಿತವಾಗಿರುವ ಇಒಗಳು, ಸಹಾಯಕ ನಿರ್ದೇಶಕರು, ಪಿಡಿಒಗಳು ಮತ್ತು ಇತರೆ ಸಿಬ್ಬಂದಿಗೆ ಸಿಇಒ ಎಚ್ಚರಿಕೆ ನೀಡಿರುವುದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ದಲಿತ ನೌಕರರನ್ನು ಗುರಿಯಾಗಿಸಿಕೊಂಡು ಸಿಇಒ ಶಿಸ್ತು ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನಿಟ್ಟುಕೊಂಡು ಸುದ್ದಿಗೋಷ್ಠಿಗಳಲ್ಲಿ ಆಧಾರರಹಿತ ಆರೋಪಗಳನ್ನು ಮಾಡಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳನ್ನು ಮನವಿ ಮಾಡಿದರು.

ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಪರಿಶಿಷ್ಟ ಜಾತಿ, ಪಂಗಡ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್​.ಸುನಿಲ್​ಕುಮಾರ್​, ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಆರ್​.ನಾಗರಾಜು, ನೌಕರರ ಸಂಘದ ಜಿಲ್ಲಾಧ್ಯಕ್ಷ ಎ.ಸುರೇಶ್​, ಪಿಡಿಒಗಳಾದ ಹನುಮಂತರಾಜು, ಶ್ರೀನಿವಾಸ್​, ಶಿವಾನಂದ್​ ಸಾತಿಹಾಳ್​, ಟಿ.ವಿ.ಶ್ರೀನಿವಾಸಮೂರ್ತಿ, ಚಂದ್ರಹಾಸ್​, ತೇಜಸ್​, ಯುವರಾಜು ಹಾಗೂ ಪದಾಧಿಕಾರಿಗಳು ಈ ವೇಳೆ ಹಾಜರಿದ್ದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net