

ರಾಮನಗರ: ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ ಮನೆ ಹಾಗೂ ಕಚೇರಿ ಮೇಲಿನ ಇಡಿ ದಾಳಿ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು, ರಾಜಕೀಯದಲ್ಲಿದ್ದಾಗ ಇದೆಲ್ಲವೂ ಸಾಮಾನ್ಯ ಎಂದು ಹೇಳಿದ್ದಾರೆ.
ನಿನ್ನೆ ದಾಳಿ ಸಂಬಂಧ ಮಾತನಾಡಿದ್ದ ಜಮೀರ್, ಯಾರೋ ಮನೆಯ ವಿಚಾರವಾಗಿ ದೂರು ಕೊಟ್ಟಿದ್ದಾರೆ. ಹಾಗಾಗಿ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ ಎಂದಿದ್ದರು. ಈ ವಿಚಾರವಾಗಿ ಬಿಡದಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಕೆ, ನಾನಂತೂ ಯಾವ ದೂರನ್ನು ಕೊಟ್ಟಿಲ್ಲ. ರಾಜಕೀಯದಲ್ಲಿದ್ದಾಗ ಇದೆಲ್ಲವೂ ಸಾಮಾನ್ಯ ಎಂದು ಹೇಳಿದರು.
ಯಾರು ದೂರು ಕೊಟ್ಟಿದ್ದಾರೆ ಅನ್ನೋದು ಇಡಿ ಅಧಿಕಾರಿಗಳಗೆ ಗೊತ್ತಿದೆ. ಅದು ನನಗೆ ಗೊತ್ತಿಲ್ಲ. ನಾನಂತೂ ಯಾವ ದೂರು ಕೊಟ್ಟಿಲ್ಲ. ಆದರೆ, ಕೇಂದ್ರ ಸರ್ಕಾರದ ಕೆಲ ಸಂಸ್ಥೆಗಳು ಮೂಗರ್ಜಿ ಬರೆಯುತ್ತಾರೆ. ಈ ರೀತಿಯ ರೇಡ್ಗಳು ನಡೆಯುತ್ತಿರುತ್ತವೆ. ನನ್ನ ತೋಟದ ಜಮೀನಿನ ವಿಚಾರದಲ್ಲಿಯೂ ದಾಳಿಯಾಗಿತ್ತು. 25 ವರ್ಷಗಳ ಕಾಲ ನನಗಾದ ಕಷ್ಟ, ಕಾಟ ನನಗೆ ಮಾತ್ರ ಗೊತ್ತಿದೆ ಎಂದರು.
ರಾಜಕೀಯದಲ್ಲಿದ್ದಾಗ ಇದೆಲ್ಲವೂ ಸಾಮಾನ್ಯ. ಆದರೆ, ನಮ್ಮ ದಾಖಲೆಗಳು ಸರಿಯಿದ್ದರೆ ಯಾರು ಏನು ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಎಚ್ಡಿಕೆ ಹೇಳಿಕೆ ನೀಡಿದರು. (ದಿಗ್ವಿಜಯ ನ್ಯೂಸ್)