ವಿದ್ಯಾರ್ಥಿಗಳು ಬದುಕನ್ನು ಸಂಭ್ರಮಿಸಲು ಕಲಿಯಲಿ: ಸಮಾಜಸೇವಕ ರವಿ ಕಟಪಾಡಿ ಸಲಹೆ

New Project (65)
Published on

ಉಳ್ಳಾಲ: ಪಾಲಕರು ಮತ್ತು ಗುರುಗಳನ್ನು ಗೌರವಿಸುವ ಜತೆ ಬದುಕನ್ನು ಸಂಭ್ರಮಿಸುವುದನ್ನು ವಿದ್ಯಾರ್ಥಿಗಳು ಕಲಿಯಬೇಕು. ಗೆಳೆಯರ ಬಳಗ ನಮ್ಮ ಯಶಸ್ಸಿನ ಆಧಾರ ಸ್ತಂಭ ಎಂಬುದನ್ನು ಅರಿತುಕೊಳ್ಳಬೇಕು ಎಂದು ಸಮಾಜಸೇವಕ ರವಿ ಕಟಪಾಡಿ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯ ಮಂಗಳಗಂಗೋತ್ರಿಯ ವಾಣಿಜ್ಯ ವಿಭಾಗದ ಆಶ್ರಯದಲ್ಲಿ, ಬ್ಯಾಂಕ್ ಆಫ್ ಬರೋಡಾ ಚೇರ್ ಮತ್ತು ವಾಣಿಜ್ಯ ಸಂಘದ ಸಂಯೋಜನೆಯೊಂದಿಗೆ ಪರಿಸರ ಸಂರಕ್ಷಣೆಗಾಗಿ ಯುವೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ನಮ್ಮ ಸ್ವಂತಕ್ಕಾಗಿ ಎಷ್ಟು ಸಂಪಾದಿಸಿದರೂ ಅದರಿಂದ ನೆಮ್ಮದಿ, ಸುಖವನ್ನು ಕೊಂಡುಕೊಳ್ಳಲಾಗದು. ಇನ್ನೊಬ್ಬರಿಗಾಗಿ, ಸಮಾಜಕ್ಕಾಗಿ ಏನನ್ನಾದರೂ ಮಾಡಲು ಸಾಧ್ಯವಾದರೆ ಅದುವೇ ನಿಜವಾದ ಸುಖ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಮಾತನಾಡಿ, ನಮ್ಮಲ್ಲಿ ಬಹುತ್ವದ ಕುರಿತು ಅಸಡ್ಡೆ ತುಂಬಿ ಮೊನೋಕಲ್ಚರ್ ಆಸಕ್ತಿ ಹೆಚ್ಚಾಗುತ್ತಿದೆ. ಪರಿಸರದ ವೈವಿಧ್ಯವನ್ನು ಅರ್ಥ ಮಾಡಿಕೊಂಡು ಅದರ ರಕ್ಷಣೆಗೆ ಮುಂದಾಗೋಣ. ಗಿಡ ನೆಡುವ ಅಭಿಯಾನ, ವಸ್ತುಗಳ ಮರುಬಳಕೆ, ತ್ಯಾಜ್ಯ ಸಂಸ್ಕರಣೆ, ಪವನ ಮತ್ತು ಸೋಲಾರ್ ಬಳಕೆ ಇತ್ಯಾದಿಗಳ ಮೂಲಕ ಪರಿಸರ ಹಾನಿಯ ತೀವ್ರತೆ ಕಡಿಮೆ ಮಾಡೋಣ ಎಂದರು.

ಮಂಗಳೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಪ್ರಶಾಂತ್ ನಾಯ್ಕ ಮಾತನಾಡಿದರು. ವಾಣಿಜ್ಯ ವಿಭಾಗ ಮುಖ್ಯಸ್ಥ ಡಾ.ಪ್ರೀತಿ ಕೀರ್ತಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಡಾ.ಈಶ್ವರ ಪಿ, ಡಾ.ವೇದವ ಪಿ, ಡಾ.ಪರಮೇಶ್ವರ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ದಿವ್ಯ ಕ್ರಾಸ್ಟ್ ಡಿ. ಸ್ವಾಗತಿಸಿದರು. ಗುಣವತಿ ವಂದಿಸಿದರು. ಸಮೃದ್ಧಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net