

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಯುವವಾಹಿನಿ ಬೆಳ್ತಂಗಡಿ ಘಟಕ ಯುವವಾಹಿನಿ ಮಹಿಳಾ ಸಂಚಾಲನಾ ಸಮಿತಿ ಆಶ್ರಯದಲ್ಲಿ ಮನಸು ಅಂತರಾಳದ ಅವಲೋಕನ ಕಾರ್ಯಕ್ರಮ ಬೆಳ್ತಂಗಡಿಯಲ್ಲಿ ನಡೆಯಿತು.
ಉದ್ಯಮಿ ರಕ್ಷಾ ರಾಘ್ನೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಯುವ ಜನತೆಗೆ ಇಂತಹ ಕಾರ್ಯಕ್ರಮ ಅತ್ಯಂತ ಅಗತ್ಯ ಇದೆ. ಯುವವಾಹಿನಿ ಇಂತಹ ಹಲವಾರು ಸಮಾಜಮುಖಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ, ಇನ್ನಷ್ಟು ಸಮಾಜಕ್ಕೆ, ಯುವ ಜನತೆಗೆ ಉಪಯೋಗವಾಗುವಂತಹ ಕೆಲಸಗಳು ಘಟಕ ಮತ್ತು ಮಹಿಳಾ ಸಂಚಾಲನಾ ಸಮಿತಿಯಿಂದ ನಡೆಯಲಿ ಎಂದರು.
ಉಡುಪಿ ಕೇಂದ್ರೀಯ ವಿದ್ಯಾಲಯದ ಶೈಕ್ಷಣಿಕ ಆಪ್ತ ಸಮಾಲೋಚಕಿ ಹರ್ಷಿತಾ ಎಂ.ವಿ.ಮಾತನಾಡಿ, ಮಕ್ಕಳು ಮತ್ತು ಮಹಿಳೆಯರ ಮೇಲಾಗಿರುವ ದೌರ್ಜನ್ಯದ ಹಲವಾರು ನೈಜ ಘಟನೆಗಳನ್ನು ತಾನು ನಿರ್ವಹಣೆ ಮಾಡಿರುವ ತನ್ನ ಅನುಭವಗಳನ್ನು ಹಂಚಿಕೊಂಡರು. ಪಾಲಕರು ಮಕ್ಕಳನ್ನು ಅವರ ಮುಂದಿನ ಬದುಕು, ಭವಿಷ್ಯ ಭದ್ರತೆಯಿಂದ ಕೂಡಿರುವಂತೆ ಗಟ್ಟಿಗೊಳಿಸಬೇಕು. ತಲೆಯಲ್ಲಿ ಯುಕ್ತಿ, ಮನಸ್ಸಲ್ಲಿ ಭಕ್ತಿ, ತೋಳಿನಲ್ಲಿ ಶಕ್ತಿ ಬೆಳೆಸಿಕೊಳ್ಳುವಂತೆ ಮಕ್ಕಳನ್ನು ನಾವು ಬೆಳೆಸಬೇಕು. ಸಾಮಾಜಿಕ ಜಾಲತಾಣದ ಒಳಿತು ಕೆಡುಕುಗಳ ಬಗ್ಗೆ ಅರಿತುಕೊಳ್ಳಬೇಕು ಎಂದರು.
ಘಟಕದ ಅಧ್ಯಕ್ಷ ಸದಾಶಿವ ಊರ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಜಾಗೃತಿ ಕಾರ್ಯಕ್ರಮಗಳಿಂದ ಯುವ ಜನತೆ ಜಾಗೃತರಾಗಿ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ಘಟಕದ ಸ್ಥಾಪಕ ಅಧ್ಯಕ್ಷ ರಾಕೇಶ್ ಕುಮಾರ್ ಮೂಡುಕೋಡಿ, ಘಟಕದ ಮಹಿಳಾ ನಿರ್ದೇಶಕಿ ಲೀಲಾವತಿ ವಸಂತ ಪೂಜಾರಿ ಉಪಸ್ಥಿತರಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಜಾತ ಅಣ್ಣಿ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಲಹೆಗಾರರಾದ ಸುಧಾಮಣಿ ಸ್ವಾಗತಿಸಿದರು. ಮಹಿಳಾ ಸಂಚಾಲನ ಸಮಿತಿ ಸಂಚಾಲಕಿ ವನಿತಾ ಜನಾದರ್ನ್ ವಂದಿಸಿದರು.