

ಅರಕಲಗೂಡು: ತಾಲೂಕಿನ ಮೋಕಲಿ ಗ್ರಾಮದಲ್ಲಿರುವ ಖಾಸಗಿ ಪಶು ಆಹಾರ ಘಟಕಕ್ಕೆ ಅಕ್ರಮವಾಗಿ ಪೂರೈಕೆ ಮಾಡುತ್ತಿದ್ದ ಯೂರಿಯಾ ರಸಗೊಬ್ಬರದ ಚೀಲ ಹಾಗೂ ಲಾರಿಯನ್ನು ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ಕೃಷಿ ಇಲಾಖೆ ಉಪ ನಿರ್ದೇಶಕಿ ಕವಿತಾ ಶುಕ್ರವಾರ ವಶಕ್ಕೆ ಪಡೆದಿದ್ದಾರೆ.
ಹಾಸನದಿಂದ 3 ಲಾರಿಗಳಲ್ಲಿ ರೈತರಿಗೆ ವಿತರಿಸಬೇಕಾಗಿದ್ದ ಸಬ್ಸಿಡಿ ದರದ ಯೂರಿಯಾ ಗೊಬ್ಬರವನ್ನು ಸಾಗಣೆ ಮಾಡುತ್ತಿದ್ದನ್ನು ಕಂಡ ಕನ್ನಡ ರಕ್ಷಣಾ ವೇದಿಕೆ ಮುಖಂಡ ಸೋಮಶೇಖರ್ ಹಾಗೂ ಕಾರ್ಯಕರ್ತರು ಘಟಕದೊಳಗೆ ತೆರಳಿ ಅಲ್ಲಿನ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಸಿಬ್ಬಂದಿ ಉಡಾಫೆಯಾಗಿ ಉತ್ತರ ನೀಡಿದ್ದಾರೆ. ಇದರಿಂದ ಅನುಮಾನಗೊಂಡ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಬಳಿಕ ತಹಸೀಲ್ದಾರ್ ಹಾಗೂ ಕೃಷಿ ಅಧಿಕಾರಿಗಳಿಗೆ ಕರೆ ಮಾಡಿ ಸ್ಥಳಕ್ಕೆ ಆಗಮಿಸುವಂತೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕಾಗಮಿಸುವಷ್ಟರಲ್ಲಿ 2 ಲಾರಿಗಳು ಗೇಟಿನಿಂದ ಹೊರ ಹೋಗಿವೆ.
ಒಂದು ಲಾರಿಯಲ್ಲಿ 270 ಚೀಲ ರಸಗೊಬ್ಬರದ ಮೂಟೆಗಳಿದ್ದವು. ಕಂಪನಿಯ ಎರಡು ಕೊಠಡಿಗಳಲ್ಲಿ ಸುಮಾರು 500ಕ್ಕೂ ಅಧಿಕ ಯೂರಿಯಾ ಮೂಟೆಗಳು ದಾಸ್ತಾನಿದ್ದವು. ಈ ಕುರಿತು ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಉತ್ತರಿಸದೆ ಮೌನ ವಹಿಸಿದ್ದರಿಂದ ಯಾವುದೇ ದಾಖಲೆಗಳು ಇಲ್ಲದ ಕಾರಣ ತಹಸೀಲ್ದಾರ್ ಬಡವರೆಡ್ಡಪ್ಪ ರೋಣದ ಹಾಗೂ ಕೃಷಿ ಇಲಾಖೆ ಉಪ ನಿರ್ದೇಶಕಿ ಕವಿತಾ ರಸಗೊಬ್ಬರದ ಚೀಲಗಳನ್ನು ವಶಕ್ಕೆ ಪಡೆದರು.
ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಘಟಕ ಕೆಎಂಎಫ್‌ನಿಂದ 15 ವರ್ಷಗಳ ಕಾಲ ಗುತ್ತಿಗೆ ಕರಾರು ಪಡೆದಿದೆ. ಗುಣಮಟ್ಟದ ಪಶು ಆಹಾರ ನೀಡುತ್ತಿಲ್ಲ. ರಿಯಾಯಿತಿ ದರದಲ್ಲಿ ನೀಡಬೇಕಾದ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಕರವೇ ಮುಖಂಡ ಸೋಮಶೇಖರ್ ದೂರಿದರು.
ರೈತರಿಗೆ ತಲುಪಿಸಬೇಕಾಗಿದ್ದ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ಜಿಲ್ಲಾ ಕೃಷಿ ಇಲಾಖೆ ಗುಪ್ತಚರ ಮುಖ್ಯಸ್ಥ ಎ.ಡಿ.ತೀರ್ಥಪ್ರಸಾದ್, ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಶಿವರಾಂ, ಎಎಸ್‌ಐ ಇಂದ್ರೇಶ್, ಕರವೇ ಮುಖಂಡರಾದ ವಿಜಯ್ ಕುಮಾರ್, ಧರ್ಮ ಇದ್ದರು.