

ಹಾವೇರಿ: ಡಿಡಿ ಚಂದನ ವಾಹಿನಿಯಲ್ಲಿ ಸರ್ಕಾರ ಲಕ್ಷಾಂತರ ರೂ.ಗಳನ್ನು ವ್ಯಯಿಸಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಆರಂಭಿಸಿದೆ. ಅದೇ ಮಾದರಿಯಲ್ಲಿ ಹಾವೇರಿ ತಾಲೂಕಿನಲ್ಲಿಯೂ ವಿದ್ಯಾರ್ಥಿಗಳ ಓದಿಗೆ ಅನುಕೂಲ ಕಲ್ಪಿಸಲು ಶಿಕ್ಷಕರು ಯುಟ್ಯೂಬ್ ಚಾನಲ್ ಒಂದನ್ನು ಆರಂಭಿಸಿದ್ದಾರೆ.
ಅಧಿಕಾರಿಗಳಿಗೆ ಇಚ್ಛಾಶಕ್ತಿಯಿದ್ದರೆ ಸರ್ಕಾರದ ಅನುದಾನವಿಲ್ಲದಿದ್ದರೂ ಉತ್ತಮ ಕೆಲಸ ಮಾಡಬಹುದು ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ. ತಾಲೂಕಿನ ಕೆಲವೆಡೆ ಚಂದನ ವಾಹಿನಿಯಲ್ಲಿ ಬಿತ್ತರಗೊಳ್ಳುವ ಆನ್ಲೈನ್ ತರಗತಿಗಳು ಕೆಲ ಕಾರಣಗಳಿಂದ ಲಭ್ಯವಾಗುತ್ತಿಲ್ಲ. ಅಲ್ಲಿನ ಸಂಪನ್ಮೂಲ ವ್ಯಕ್ತಿಗಳ ಭಾಷೆಯು ಭಿನ್ನವಾಗಿದೆ ಎಂಬ ದೂರುಗಳು ವಿದ್ಯಾರ್ಥಿಗಳಿಂದ ಕೇಳಿಬಂದಿದ್ದವು. ಅಲ್ಲದೆ, ಸ್ಥಳೀಯ ಶಿಕ್ಷಕರಿಂದಲೇ ಚಂದನ ವಾಹಿನಿಯಲ್ಲಿ ಬರುವ ಪಾಠಗಳ ಮಾದರಿಯಲ್ಲಿ ಆನ್ಲೈನ್ ಪಾಠ ಬೋಧನೆ ಮಾಡಿಸಿದರೆ ಉತ್ತಮ ಎಂಬ ಅಭಿಪ್ರಾಯ ಪಾಲಕರಿಂದ ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ಹಾವೇರಿ ಬಿಇಒ ಎಂ.ಎಚ್. ಪಾಟೀಲ ಅವರು ಕಳೆದ 2 ತಿಂಗಳ ಕಾಲ ತಮ್ಮ ಆಪ್ತ ಶಿಕ್ಷಕ ಸಮೂಹದೊಂದಿಗೆ ಚಿಂತನೆ ನಡೆಸಿ, ಆಧುನಿಕ ತಂತ್ರಜ್ಞಾನದ ಸೌಲಭ್ಯ ಬಳಸಿಕೊಂಡು ತಾಲೂಕಿನ ವಿದ್ಯಾರ್ಥಿಗಳಿಗೆ ಸ್ಥಳೀಯ ಶಿಕ್ಷಕರಿಂದ ಆನ್ಲೈನ್ ಪಾಠ ಬೋಧನೆ ಆರಂಭಿಸುವ ಯೋಜನೆ ಸಿದ್ಧಗೊಳಿಸಿದರು. ಬಿಇಒ ಅವರ ಚಿಂತನೆಗೆ ಕೈಜೋಡಿಸಿದ ಅನೇಕ ಶಿಕ್ಷಕರು ತಮ್ಮಲ್ಲಿನ ಪಾಠ ಬೋಧನೆ ಜೊತೆಗೆ ತಾಂತ್ರಿಕ ಜ್ಞಾನ ಬಳಸಿಕೊಳ್ಳುತ್ತೇವೆ. ಹೊರಗಿನಿಂದ ಯಾವುದೇ ವ್ಯಕ್ತಿಗಳನ್ನು ಕರೆಯಿಸದೆ ನಾವೇ ಒಂದು ಯೂಟ್ಯೂಬ್ ಚಾನಲ್ ಆರಂಭಿಸೋಣ ಎಂಬ ನಿರ್ಧಾರಕ್ಕೆ ಬಂದರು. ಇದರ ಫಲವಾಗಿ ವರದಾ ಜ್ಞಾನವಾಹಿನಿ ಎಂಬ ಯೂಟ್ಯೂಬ್ ಚಾನಲ್ ಅನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ತಾಲೂಕು ಕೇಂದ್ರದಲ್ಲಿ ಆರಂಭವಾಗುತ್ತಿದ್ದು, ಇದು ಜಿಲ್ಲೆಗೆ ಗರಿ ಮೂಡಿಸಿದೆ.
ಕಳೆದೊಂದು ತಿಂಗಳಿನಿಂದ ತಾಲೂಕಿನಲ್ಲಿಯ 80 ನುರಿತ ಶಿಕ್ಷಕರನ್ನು ಈ ಕೆಲಸಕ್ಕೆ ನಿಯೋಜಿಸಲಾಗಿದೆ. ಈ ಶಿಕ್ಷಕರು ತಮ್ಮ ನಿತ್ಯದ ಕೆಲಸದ ಜೊತೆಗೆ ಈ ಚಾನಲ್ ಆರಂಭಕ್ಕೂ ಸಮಯ ಮೀಸಲಿಟ್ಟು ಕೆಲಸ ಮಾಡಿದ್ದಾರೆ. ಈ 80 ಶಿಕ್ಷಕರಲ್ಲಿ 60 ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಬೋಧಿಸಲು ಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ನಿರ್ವಹಿಸಿದರೆ 15 ಶಿಕ್ಷಕರು ತಾಂತ್ರಿಕ ವ್ಯವಸ್ಥೆಯಲ್ಲಿ ತೊಡಗಿದ್ದಾರೆ. ಇನ್ನುಳಿದ ಐವರು ಶಿಕ್ಷಕರು ಉಳಿದ ಜವಾಬ್ದಾರಿ ನಿಭಾಯಿಸಿದ್ದಾರೆ. ಈಗಾಗಲೇ ಒಂದು ವಿಷಯದ ತಲಾ 10ರಂತೆ ಒಟ್ಟು 60 ಪಾಠಗಳ ಚಿತ್ರೀಕರಣ ಪೂರ್ಣಗೊಂಡಿದೆ.
ಪೂರ್ಣ ಹೈಟೆಕ್ ಪಾಠ
ಡಿಡಿ ಚಂದನ ವಾಹಿನಿಯಲ್ಲಿ ಬರುವಂತೆ ತಾಲೂಕಿನ ಶಿಕ್ಷಕರು ಮಾಡುವ ಪಾಠಗಳ ಚಿತ್ರೀಕರಣವನ್ನು ನಗರದ ಗೆಳೆಯರ ಬಳಗದ ಪ್ರೌಢಶಾಲೆಯಲ್ಲಿ ನಡೆಸಲಾಗುತ್ತಿದೆ. ಇದರೊಂದಿಗೆ 10 ಕಡೆಗಳಲ್ಲಿ ಪಿಪಿಟಿ ಕೆಲಸವೂ ನಡೆಯುತ್ತಿದೆ. ಗೆಳೆಯರ ಬಳಗ ಶಾಲೆಯ ಒಂದು ಕೊಠಡಿಯನ್ನು ತಾತ್ಕಾಲಿಕವಾಗಿ ಸ್ಟುಡಿಯೋ ಮಾದರಿಯಲ್ಲಿ ತಯಾರಿಸಿಕೊಳ್ಳಲಾಗಿದೆ. ಗ್ರೀನ್ವ್ಯಾಟ್ ಮುಂದೆ ಶಿಕ್ಷಕರು ಪಾಠ ಮಾಡುವುದನ್ನು ಚಿತ್ರೀಕರಿಸಲಾಗುತ್ತದೆ. ನಂತರ ಪಾಠದ ಪಿಪಿಟಿಯನ್ನು ಮಿಕ್ಸಿಂಗ್ ಮಾಡಿ ವಿದ್ಯಾರ್ಥಿಗಳಿಗೆ ಪಾಠ ಸುಲಭವಾಗಿ ಅರ್ಥವಾಗುವಂತೆ ಮಾಡಲಾಗಿದೆ. ಇದರ ತಾಂತ್ರಿಕ ಜವಾಬ್ದಾರಿಯ ಉಸ್ತುವಾರಿಯನ್ನು ಮೇವುಂಡಿ ಶಾಲೆ ಶಿಕ್ಷಕ ಪ್ರಮೋದಕುಮಾರ ವಹಿಸಿಕೊಂಡಿದ್ದಾರೆ. ಇನ್ನು ನೋಡಲ್ ಅಧಿಕಾರಿಗಳಾಗಿ ಎನ್.ಐ. ಇಚ್ಚಂಗಿ, ಟಿ. ಮಂಜುನಾಥ ಇತರರು ಕೆಲಸ ಮಾಡುತ್ತಿದ್ದಾರೆ.
ಲೋಕಾರ್ಪಣೆ ನಾಳೆ
ವರದಾ ಜ್ಞಾನವಾಹಿನಿ ಯೂಟ್ಯೂಬ್ ಚಾನಲ್ ಅನ್ನು ನ. 23ರಂದು ಲೋಕಾರ್ಪಣೆಗೊಳಿಸಲು ಸಕಲ ಸಿದ್ಧತೆ ನಡೆದಿದೆ. ವಿಡಿಯೋ ಚಿತ್ರೀಕರಣಕ್ಕೆ ಅವಶ್ಯವಿದ್ದ ಕ್ಯಾಮರಾ, ಲೈಟಿಂಗ್, ಗ್ರೀನ್ವ್ಯಾಟ್, ಲ್ಯಾಪ್ಟಾಪ್ ಸೇರಿದಂತೆ ಇನ್ನಿತರ ವೆಚ್ಚಗಳನ್ನು ಸ್ವತಃ ಬಿಇಒ ಎಂ.ಎಚ್. ಪಾಟೀಲ ಅವರೇ ಭರಿಸಿದ್ದಾರೆ.
2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪ್ರಸ್ತುತ ಕರೊನಾ ಸಮಯದಲ್ಲಿ ಮಕ್ಕಳ ಸುರಕ್ಷತೆ ಹಾಗೂ ಕಲಿಕೆಯ ದೃಷ್ಟಿಯಿಂದ ಯೂಟ್ಯೂಬ್ ಚಾನಲ್ ಅನ್ನು ಎಲ್ಲ ಶಿಕ್ಷಕರ ಸಹಕಾರದೊಂದಿಗೆ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಅನೇಕರು ಸಾಕಷ್ಟು ಶ್ರಮವಹಿಸಿದ್ದಾರೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದು ಉತ್ತಮ ಫಲಿತಾಂಶ ತಂದರೆ ನಮ್ಮ ಶ್ರಮ ಸಾರ್ಥಕವಾಗಲಿದೆ. ಮುಂದಿನ ದಿನಗಳಲ್ಲಿ ಆಂಗ್ಲ ಮಾಧ್ಯಮದ ಬೋಧನೆ ಹಾಗೂ 7ನೇ ತರಗತಿಯ ವಿದ್ಯಾರ್ಥಿಗಳಿಗೂ ಈ ಚಾನಲ್ ಮೂಲಕ ಬೋಧನೆ ಮಾಡುವ ಗುರಿಯಿದೆ.| ಎಂ.ಎಚ್. ಪಾಟೀಲ, ಬಿಇಒ ಹಾವೇರಿ