ರೈಲಿನಡಿಗೆ ಬಿದ್ದು ಯುವಕ ಆತ್ಮಹತ್ಯೆ,ಪ್ರೇಯಸಿಯ ನಿಧನದಿಂದ ಖಿನ್ನನಾಗಿ ಕೃತ್ಯ

kartik
Published on

ಮೂಲ್ಕಿ: ಕೊಲಕಾಡಿ ರೈಲ್ವೇ ಗೇಟ್ ಬಳಿ ಚಲಿಸುತ್ತಿರುವ ರೈಲಿಗೆ ಯುವಕನೋರ್ವ ಅಡ್ಡ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೊಲೊಟ್ಟು ನಿವಾಸಿ ಮೀರಾ ಎಂಬುವರ ಪುತ್ರ ಕಾರ್ತಿಕ್ ಪೂಜಾರಿ(20) ಆತ್ಮಹತ್ಯೆ ಮಾಡಿಕೊಂಡ ಯುವಕ. ಚಿತ್ರದುರ್ಗದಲ್ಲಿ ಮೆಕಾನಿಕ್ ಆಗಿ ದುಡಿಯುತ್ತಿದ್ದ ಕಾರ್ತಿಕ್ ಶನಿವಾರ ಮನೆಗೆ ಬಂದಿದ್ದ. ಭಾನುವಾರ ಸುಮಾರು 11 ಗಂಟೆಗೆ ರೈಲ್ವೇ ಗೇಟ್ ಬಳಿ ರೈಲಿಗೆ ಅಡ್ಡ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರ್ತಿಕ್ ಪೂಜಾರಿ ತಾಯಿ, ಅಜ್ಜಿ ಜತೆ ಮೈಲೊಟ್ಟಿನಲ್ಲಿ ನೆಲೆಸಿದ್ದು, ಕಳೆದ ಕೆಲ ತಿಂಗಳ ಹಿಂದೆ ಚಿತ್ರದುರ್ಗದಲ್ಲಿ ಸಂಬಂಧಿಕರ ಗ್ಯಾರೇಜ್‌ನಲ್ಲಿ ಮೆಕಾನಿಕ್ ಆಗಿ ಕೆಲಸಕ್ಕೆ ಸೇರಿದ್ದನು.

ಈ ನಡುವೆ ಕಾಲೇಜಿನಲ್ಲಿರುವಾಗ ಕಾರ್ತಿಕ್ ಪೂಜಾರಿ ಸಹಪಾಠಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಇಬ್ಬರು ಅಪ್ರಾಪ್ತರಾದ ಕಾರಣ ಮದುವೆಗೆ ಅನುಮತಿ ಲಭಿಸಿರಲಿಲ್ಲ. ಬಳಿಕ ಪ್ರಾಪ್ತ ವಯಸ್ಸಿಗೆ ಬಂದಾಗ ಮದುವೆ ಮಾಡಿಕೊಡುವ ಬಗ್ಗೆ ಬಾಂಡ್ ಪೇಪರ್ ಮೂಲಕ ಸಮ್ಮತಿ ದೊರೆತಿತ್ತು ಎನ್ನಲಾಗಿದೆ.
ಈ ನಡುವೆ ಯುವತಿಯನ್ನು ಏಕಾಏಕಿ ಅವಳ ಮನೆಯವರು ಮೂಡುಬಿದಿರೆಗೆ ಕಳುಹಿಸಿದ್ದು, ಅಲ್ಲಿ ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿ ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಚಿತ್ರದುರ್ಗದಲ್ಲಿದ್ದ ಕಾರ್ತಿಕ್‌ಗೆ ಈ ವಿಚಾರ ತಿಳಿದು ಏಕಾಏಕಿ ಶನಿವಾರ ಸಂಜೆ ಮನೆಗೆ ಬಂದಿದ್ದ. ತಾಯಿ ತುರ್ತು ಕೆಲಸ ನಿಮಿತ್ತ ಕೇರಳಕ್ಕೆ ಹೋಗಿ ಭಾನುವಾರ ಬೆಳಗ್ಗೆ ಬರುವಷ್ಟರಲ್ಲಿ ಕಾರ್ತಿಕ್ ತನ್ನ ಮನೆಯ ಅಣತಿ ದೂರದಲ್ಲಿರುವ ರೈಲ್ವೇ ಹಳಿಯಲ್ಲಿ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಪಘಾತದ ತೀವ್ರತೆಗೆ ರೈಲು ಕಾರ್ತಿಕ್ ಪೂಜಾರಿಯನ್ನು ಮಾರುದ್ದ ಎಳೆದುಕೊಂಡು ಹೋಗಿದ್ದು ದೇಹ ಗುರುತಿಸಲಾಗದಷ್ಟು ಛಿದ್ರವಾಗಿದೆ. ಸ್ಥಳಕ್ಕೆ ಮೂಲ್ಕಿ ಪೊಲೀಸ್ ನಿರೀಕ್ಷಕ ವಿದ್ಯಾಧರ್ ಭೇಟಿ ನೀಡಿ ಪರಿಶೀಲಿಸಿದ್ದು, ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net