More

    ಸಾಸ್ತಾನ ಟೋಲ್‌ನಲ್ಲಿ ದಿಢೀರ್ ಪ್ರತಿಭಟನೆ, ಸ್ಥಳೀಯರಿಂದ ಟೋಲ್ ವಸೂಲಿಗೆ ಆಕ್ರೋಶ

    ವಿಜಯವಾಣಿ ಸುದ್ದಿಜಾಲ ಕೋಟ


    ಸಾಸ್ತಾನ ಟೋಲ್‌ನಲ್ಲಿ ಕೋಟ ವ್ಯಾಪ್ತಿಯ ವಾಹನಗಳಿಗೆ ವಿನಾಯಿತಿ ಮುಂದುವರಿಸುವಂತೆ ಮತ್ತು ಸ್ಥಳೀಯರಿಂದ ಟೋಲ್ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಶನಿವಾರ ಹೆದ್ದಾರಿ ಜಾಗೃತಿ ಸಮಿತಿ ಸದಸ್ಯರು ಮತ್ತು ಸ್ಥಳೀಯರು ಧಿಡೀರ್ ಪ್ರತಿಭಟನೆ ನಡೆಸಿದರು.

    ಹಲವಾರು ವರ್ಷಗಳ ಹೋರಾಟದ ಫಲವಾಗಿ ಪರಿಸರದ ವಾಹನಗಳಿಗೆ ಟೋಲ್ ವಿನಾಯಿತಿ ದೊರೆತಿತ್ತು. ಆದರೆ ನವಯುಗದಿಂದ ಇನ್ನೊಂದು ಕಂಪನಿಗೆ ಟೋಲ್ ವಸೂಲಿ ಮಾಡಲು ನೀಡಿದ್ದರಿಂದ ಕಳೆದ ಒಂದು ವಾರದಿಂದ ಸ್ಥಳೀಯರಿಂದ ಟೋಲ್ ವಸೂಲಿ ಮಾಡುತ್ತಿರುವುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು.

    ಸಾಸ್ತಾನದ ಶಿವಕೃಪಾದಲ್ಲಿ ಹೆದ್ದಾರಿ ಜಾಗೃತಿ ಸಮಿತಿ ಸಭೆ ನಡೆಸಿ ಪ್ರತಿಭಟನೆ ನಡೆಸಲು ಮುಂದಾಯಿತು. ನೂರಾರು ಮಂದಿ ಟೋಲ್‌ಗೆ ಧಾವಿಸಿ ಪ್ರತಿಭಟನೆ ನಡೆಸಿ ಟೋಲ್ ಹಿಂಪಡೆಯುವಂತೆ ಆಗ್ರಹಿಸಿ ಘೋಷಣೆ ಕೂಗಿದರು. 10 ನಿಮಿಷ ಟೋಲ್ ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಕಾವು ಹೆಚ್ಚಿದ ಹಿನ್ನೆಲೆಯಲ್ಲಿ ಬ್ರಹ್ಮಾವರ ಠಾಣೆ ಇನ್‌ಸ್ಪೆಕ್ಟರ್ ದಿವಾಕರ್ ಪಿ.ಎಂ. ಆಗಮಿಸಿ ಸಮಿತಿ ಸದಸ್ಯರೊಂದಿಗೆ ಚರ್ಚಿಸಿದರು. ಸೋಮವಾರ ಹೆದ್ದಾರಿ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಒದಗಿಸುವ ಬಗ್ಗೆ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದ ಕಾರಣ ಪ್ರತಿಭಟನೆ ಹಿಂಪಡೆಯಲಾಯಿತು.

    10 ನಿಮಿಷ ಟೋಲ್‌ನಿಂದ ಮುಕ್ತಿ

    ಟೋಲ್‌ನಲ್ಲಿ ಧಿಡೀರ್ ಪ್ರತಿಭಟನೆ ನಡೆಸಿದ ಕಾರಣ ಟೋಲ್ ಸಿಬ್ಬಂದಿ ಟೋಲ್ ಬಂದ್ ಮಾಡಿ ವಾಹನಗಳನ್ನು ಶುಲ್ಕ ರಹಿತವಾಗಿ ಬಿಟ್ಟಿದ್ದರಿಂದ ಹಲವಾರು ವಾಹನಗಳು 10 ನಿಮಿಷಗಳ ಕಾಲ ಯಾವುದೇ ಟೋಲ್ ಇಲ್ಲದೇ ಸಂಚಾರ ನಡೆಸಿದವು.

    ಉಗ್ರ ಪ್ರತಿಭಟನೆ ಎಚ್ಚರಿಕೆ

    ಸಮಸ್ಯೆಗೆ ಸೋಮವಾರ ಯಾವುದೇ ಪರಿಹಾರ ದೊರಕದೇ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮ ಸುಂದರ ನಾಯರಿ ಎಚ್ಚರಿಸಿದ್ದಾರೆ.

    ಸಮಿತಿ ನಿಕಟಪೂರ್ವ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಪ್ರಮುಖರಾದ ವಿಠಲ ಪೂಜಾರಿ, ಆಲ್ವಿನ್ ಅಂದ್ರಾದೆ ಮತ್ತು ನೂರಾರು ಸ್ಥಳೀಯ ವಾಹನ ಮಾಲೀಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಮನೆಯಲ್ಲಿದ್ದರೂ ಶುಲ್ಕ ಕಡಿತ

    ಟೋಲ್‌ನ ಎರಡೂ ಕಡೆ ಮೊದಲ ಲೈನ್ ಸ್ಥಳೀಯರಿಗೆ ಮೀಸಲಿದ್ದು, ಸ್ಥಳೀಯರು ಆಧಾರ್ ಕಾರ್ಡ್ ಮತ್ತು ವಾಹನ ದಾಖಲೆ ತೋರಿಸಿದರೆ ಟೋಲ್ ವಿನಾಯಿತಿ ಸಿಗುತ್ತಿತ್ತು. ಆದರೆ ಮನೆ ತಲುಪಿದ ಒಂದೆರಡು ಗಂಟೆಗಳಲ್ಲಿ ಟೋಲ್ ಶುಲ್ಕ ಕಡಿತವಾದ ಸಂದೇಶ ಮೊಬೈಲ್‌ಗೆ ಬಂದಿರುವ ಬಗ್ಗೆ ಹಲವು ದೂರುಗಳು ಕೇಳಿ ಬರುತ್ತಿತ್ತು. ಇದಲ್ಲದೇ ಮನೆಯಲ್ಲೇ ಇದ್ದ ವಾಹನಗಳಿಗೂ ಟೋಲ್ ಶುಲ್ಕ ಕಡಿತಗೊಳ್ಳುತ್ತಿರುವ ಬಗ್ಗೆಯೂ ಅನೇಕ ದೂರುಗಳು ಕೇಳಿ ಬಂದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts