More

    ಹೆದ್ದಾರಿಯಲ್ಲಿ ಸಾಲು ಸಾಲು ಸಮಸ್ಯೆ, ಮಳೆಗಾಲದಲ್ಲಿ ಕೃತಕ ನೆರೆ ಸಾಧ್ಯತೆ, ಅರೆಬರೆ ಕಾಮಗಾರಿಯಿಂದ ತೊಂದರೆ

    ಹರಿಪ್ರಸಾದ್ ನಂದಳಿಕೆ ಕಾರ್ಕಳ

    ಮಳೆಗಾಲ ಆರಂಭವಾಗುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾತ್ರ ಅರೆಬರೆಯಾಗಿ ನಡೆಯುತ್ತಿದ್ದು, ಕಾರ್ಕಳ- ಬಿಕರ್ನಕಟ್ಟೆ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ವಾಹನ ಸವಾರರ ಸಹಿತ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

    ರಾಷ್ಟ್ರೀಯ ಹೆದ್ದಾರಿ 169ರ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿ ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಸಾಣೂರು ಗ್ರಾಮದಿಂದ ದ.ಕ. ಜಿಲ್ಲೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಿಕರ್ನಕಟ್ಟೆವರೆಗೆ 45 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಸಚಿವಾಲಯದಿಂದ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ 2016ರ ಮೇ 10ರಂದು ಪ್ರಾಥಮಿಕ ಭೂಸ್ವಾಧೀನ ಪ್ರಕ್ರಿಯೆ 8 ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ. ಭೂಸ್ವಾಧೀನ ವಿಳಂಬ, ಕೃಷಿ ಜಮೀನಿಗೆ ಅತ್ಯಲ್ಪ ಪರಿಹಾರ ಮೊತ್ತ ವಿತರಣೆಯಲ್ಲಿ ವ್ಯತ್ಯಾಸ, ಆಗಾಗ ರಸ್ತೆಯ ಅಲೈನ್ಮೆಂಟ್ ಬದಲಾವಣೆ ಇತ್ಯಾದಿ ಗೊಂದಲಗಳ ಮಧ್ಯೆ ಹೆದ್ದಾರಿ ಕಾಮಗಾರಿ ಕುಂಟುತಾ ಸಾಗುತ್ತಿದೆ.

    2022ರ ಅಕ್ಟೋಬರ್ ತಿಂಗಳಲ್ಲಿ ರಸ್ತೆ ನಿರ್ಮಾಣಕ್ಕಾಗಿ ಕಾರ್ಯಾದೇಶ ಪಡೆದ ಗುತ್ತಿಗೆದಾರ ಕಂಪನಿ ಒಪ್ಪಂದದ ಪ್ರಕಾರ 2024 ಅಕ್ಟೋಬರ್ ಒಳಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಮುಗಿಸಬೇಕಿತ್ತು. ಆದರೆ ಅರ್ಧದಷ್ಟು ಕಾಮಗಾರಿ ಇಲ್ಲಿವರೆಗೂ ನಡೆದಿಲ್ಲ ಎನ್ನುವ ಆರೋಪವಿದೆ.

    ಸವಾರರ ಸಂಕಷ್ಟ

    ಅರೆಬರೆ ಹೆದ್ದಾರಿ ಕಾಮಗಾರಿಯಿಂದ ಈ ಬಾರಿ ಮಳೆಗಾಲದಲ್ಲಿ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆಯಿದೆ. ಈಗಾಗಲೇ ಸುರಿದ ಅಲ್ಪ ಮಳೆಗೆ ಹೆದ್ದಾರಿ ಪಕ್ಕದಲ್ಲಿ ಸರಿಯಾಗಿ ನೀರು ಹರಿದು ಹೋಗಲು ವ್ಯವಸ್ಥೆಯಿಲ್ಲದೆ ಅಲ್ಲಲ್ಲಿ ನೀರು ನಿಂತು ವಾಹನ ಸವಾರರಿಗೆ ಕಷ್ಟಕರವಾಗಿದೆ. ಹೆದ್ದಾರಿಗೆ ಸಂಪರ್ಕ ಪಡೆಯುವ ರಸ್ತೆ ಕೆಸರಿನಿಂದ ಕೂಡಿದ್ದು ಗ್ರಾಮದ ಜನಸಂಕಟ ಅನುಭವಿಸುವಂತಾಗಿದೆ. ಮೊದಲ ತುಂತುರು ಮಳೆಗೆ ಈ ರೀತಿಯ ಸಮಸ್ಯೆಯಾಗಿದ್ದು ಮುಂದಿನ ದಿನಗಳಲ್ಲಿ ಸಮಸ್ಯೆ ಬಿಗಡಾಯಿಸುವ ಸಾಧ್ಯತೆಗಳಿವೆ.


    ಹೆದ್ದಾರಿಯಲ್ಲಿ ಸಾಲು ಸಾಲು ಸಮಸ್ಯೆ, ಮಳೆಗಾಲದಲ್ಲಿ ಕೃತಕ ನೆರೆ ಸಾಧ್ಯತೆ, ಅರೆಬರೆ ಕಾಮಗಾರಿಯಿಂದ ತೊಂದರೆ

    ಅವೈಜ್ಞಾನಿಕ ಕಾಮಗಾರಿ

    ಅತಿ ವಿಳಂಬದ ಭೂ ಸರ್ವೇ ಕಾರ್ಯ ಮೌಲ್ಯಮಾಪನ, ಭೂಸ್ವಾಧೀನ ಪ್ರಕ್ರಿಯೆ ತೊಡಕಿನಿಂದಾಗಿ ಗುತ್ತಿಗೆದಾರ ಕಂಪನಿ ಮಧ್ಯಪ್ರದೇಶ ಮೂಲದ ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಗೆ ರಸ್ತೆ ನಿರ್ಮಾಣಕ್ಕೆ ಸರಾಗವಾಗಿ ನಡೆಸಲು ಭೂಮಿ ಸಿಗದೆ ಅಲ್ಲಲ್ಲಿ ಅರೆಬರೆ ಕಾಮಗಾರಿ ನಡೆಸುವಂತಾಗಿದೆ. ಕುಂಟುತ್ತಾ ಸಾಗುತ್ತಿರುವ ಹೆದ್ದಾರಿ ಕಾಮಗಾರಿ, ವಾಹನಗಳ ಸುರಕ್ಷತೆ ಪಾಲಿಸದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಜನ ಹೈರಾಣವಾಗಿದ್ದಾರೆ.


    ಸಾರ್ವಜನಿಕರ ಆಕ್ರೋಶ

    ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಗ್ರಾಮಗಳ ಅಡ್ಡರಸ್ತೆಗೆ ಸರಿಯಾದ ಸಂಪರ್ಕ ವ್ಯವಸ್ಥೆ ಮಾಡದೆ ಕೆಲವು ಕಡೆ ಕೇವಲ ಮಣ್ಣು ಅಥವಾ ಜಲ್ಲಿ ಹರಡಿರುವ ಕಾರಣ ಪದೇಪದೆ ಅಪಘಾತಕ್ಕೆ ಕಾರಣವಾಗುತ್ತಿದೆ. ವಿದ್ಯುತ್ ಕಂಬ ಮತ್ತು ಟ್ರಾನ್ಸ್‌ಫಾರ್ಮರ್ ಸರಿಯಾದ ವೇಳೆಗೆ ಸ್ಥಳಾಂತರಿಸುವ ಕೆಲಸವಾಗಿಲ್ಲ. ರಾಷ್ಟ್ರೀಯ ಹೆದ್ದಾರಿ ಮುಖ್ಯ ರಸ್ತೆ ಮತ್ತು ಸರ್ವೀಸ್ ರಸ್ತೆ ಪೂರ್ಣಗೊಂಡ ಪ್ರದೇಶದಲ್ಲಿ ಬೀದಿ ದೀಪ ಅಳವಡಿಸುವ ಬಗ್ಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಗ್ರಾಮದ ಜನ ಕತ್ತಲಲ್ಲೇ ಸಾಗುವಂತಾಗಿದೆ. ಕತ್ತಲಲ್ಲಿ ಡೈವರ್ಶನ್ ತಿಳಿಯದೆ ವಾಹನ ಅಪಘಾತ ನಡೆಯುತ್ತಿದೆ. ರಸ್ತೆ ಬದಿ ತೆರೆವುಗೊಳಿಸಿದ ಮರಗಳಿಗೆ ಬದಲಾಗಿ 10 ಪಟ್ಟು ಹೊಸ ಸಸಿಗಳನ್ನು ರಸ್ತೆ ಬದಿ ನೆಡಲು ಯಾವುದೇ ಮಾಹಿತಿ ಅಥವಾ ಪೂರ್ವ ತಯಾರಿ ನಡೆಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ ಬದಿ ಗುಡ್ಡ ಕಡಿದಿರುವ ಜಾಗಕ್ಕೆ ತಡೆಗೋಡೆ ನಿರ್ಮಾಣ ಕಾರ್ಯ ಇನ್ನೂ ನಡೆಯದಿರುವ ಪರಿಣಾಮ ಮಳೆಗಾಲದ ಗುಡ್ದ ಕುಸಿತವಾಗುವ ಭೀತಿ ಎದುರಾಗಿದೆ. ಸರ್ಕಾರಿ ಶಾಲಾ ಕಾಲೇಜು ಜಾಗ, ಸರ್ಕಾರಿ ಕಟ್ಟಡಗಳ ತೆರವುಗೊಳಿಸಿರುವುದಕ್ಕೆ ಇನ್ನೂ ಪರಿಹಾರ ನೀಡಿಲ್ಲ. ಬಸ್ ನಿಲ್ದಾಣ ಹಾಗೂ ರಿಕ್ಷಾ ನಿಲ್ದಾಣ ತೆರವುಗೊಳಿಸಿದ ಕಡೆಗಳಲ್ಲಿ ಬದಲಿ ಜಾಗ ಗುರುತಿಸದೇ ಇನ್ನೂ ನಿರ್ಮಾಣ ಕಾರ್ಯ ಮಾಡದ ಹಿನ್ನೆಲೆ ಪ್ರಯಾಣಿಕರ ಸಹಿತ ರಿಕ್ಷಾ ಚಾಲಕರು ಹಾಗೂ ಬಸ್ ಚಾಲಕರು ಸದಾ ಸಮಸ್ಯೆ ಎದುರಿಸುವಂತಾಗಿದೆ.

    ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮಸ್ಯೆಗಳಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಅಧಿಕಾರಿಗಳ ಗಮನಕ್ಕೆ ತಂದು ಮಳೆಗಾಲದಲ್ಲಿ ಸಮಸ್ಯೆಗಳಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗುವುದು.
    -ಡಾ.ವಿದ್ಯಾಕುಮಾರಿ ಜಿಲ್ಲಾಧಿಕಾರಿ

    ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿ ಅರೆಬರೆಯಾಗಿ ನಡೆಯುತ್ತಿದ್ದು, ಮಳೆಗಾಲದ ಸಂದರ್ಭ ಮತ್ತಷ್ಟು ಸಮಸ್ಯೆಗಳಾಗುವ ಸಾಧ್ಯತೆಯಿದೆ. ಸರಿಯಾಗಿ ಮಳೆ ನೀರು ಹರಿದು ಹೋಗಲು ವ್ಯವಸ್ಥೆಯಿಲ್ಲದೆ ತಗ್ಗು ಪ್ರದೇಶಗಳು ಕೃತಕ ನೆರೆಯ ಸಮಸ್ಯೆ ಎದುರಿಸಬೇಕಾದಿತು.
    -ಸಾಣೂರು ನರಸಿಂಹ ಕಾಮತ್ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಪ್ರಮುಖರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts