More

  ನಾಯಿ ಕಡಿತಕ್ಕೊಳಗಾದ ಬಾಲಕನಿಗೆ ಸಿಗದ ಚಿಕಿತ್ಸೆ

  ಸೇವೆಗಿಲ್ಲದ ಪಾತಪಾಳ್ಯ ಸರ್ಕಾರಿ ಆಸ್ಪತ್ರೆ ವೈದ್ಯರು, ಆರೋಗ್ಯ ಸಹಾಯಕಿಯರಿಲ್ಲ


  ಬಾಗೇಪಲ್ಲಿ: ತುರ್ತು ವೈದ್ಯಕೀಯ ಸೇವೆ ನೀಡಬೇಕಾದ ವೈದ್ಯರು, ಆರೋಗ್ಯ ಸಹಾಯಕಿಯರು ಇಲ್ಲದೆ ನಾಯಿ ಕಡಿತಕ್ಕೊಳಗಾದ 3 ವರ್ಷದ ಬಾಲಕ ಕಾದು ಸುಸ್ತಾದ ಪ್ರಸಂಗ ತಾಲೂಕಿನ ಪಾತಪಾಳ್ಯ ಆಸ್ಪತ್ರೆಯಲ್ಲಿ ಶನಿವಾರ ನಡೆದಿದೆ.
  ಬಾಗೇಪಲ್ಲಿ ತಾಲೂಕಿನ ಗುಜ್ಜೇಪಲ್ಲಿ ಗ್ರಾಮದ ಅಕ್ಷಯ್ ಶನಿವಾರ ಮಧ್ಯಾಹ್ನ ನಾಯಿ ಕಡಿತಕ್ಕೆ ಒಳಗಾಗಿದ್ದು, ತಂದೆ ಶ್ರೀನಿವಾಸ್ ಅವರು ಪುತ್ರನನ್ನು ಚಿಕಿತ್ಸೆಗಾಗಿ ಪಾತಪಾಳ್ಯ ಹೋಬಳಿ ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಸಂಜೆವರೆಗೂ ಕಾದರೂ ಚಿಕಿತ್ಸೆ ಸಿಗದ ಕಾರಣ ಮಗನನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಸೂಕ್ತ ಚಿಕಿತ್ಸೆ ಸಿಗದಿದ್ದಕ್ಕೆ ಅಕ್ಷಯ್ ಪಾಲಕರು ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
  ಪಾತಪಾಳ್ಯದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು, ಆರೋಗ್ಯ ಸಹಾಯಕಿಯರು, ಸಿಬ್ಬಂದಿ ನಿರ್ಲಕ್ಷ್ಯ ಮಾಡುತ್ತಾರೆ. ಆಸ್ಪತ್ರೆ ಬಾಗಿಲು ತೆರೆದಿದ್ದರೂ ಸೇವೆಗಳು ಸಿಗುವುದಿಲ್ಲ. ಇದರಿಂದ ರೋಗಿಗಳಿಗೆ ದಿಕ್ಕು ತೋಚದಂತಾಗಿದೆ.
  ಸೋಮನಾಥಪುರ, ಪಾತಪಾಳ್ಯ, ತೊಳ್ಳಪಲ್ಲಿ, ನಾರೇಮದ್ದೇಪಲ್ಲಿ ಗ್ರಾಮ ಪಂಚಾಯಿತಿಯ 65ಕ್ಕೂ ಹೆಚ್ಚು ಗ್ರಾಮಗಳ ಜನರು ನಾಯಿ ಹಾಗೂ ಹಾವು ಕಡಿತ, ಅಪಘಾತ, ವಿದ್ಯುತ್ ಅವಘಡ, ಜ್ವರ, ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾದರೆ ಪಾತಪಾಳ್ಯದ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ಆದರೆ, ಇಲ್ಲಿನ ಆಸ್ಪತ್ರೆಯಲ್ಲಿ ವೈದ್ಯರು, ಆರೋಗ್ಯ ಸಹಾಯಕಿಯರು ಇಲ್ಲದ ಕಾರಣ ಆಸ್ಪತ್ರೆಗೆ ಬರುವ ರೋಗಿಗಳು ಆರೋಗ್ಯ ಸೇವೆಗಳಿಂದ ವಂಚಿತರಾಗಿ ಪ್ರಾಣವನ್ನು ಅಂಗೈನಲ್ಲಿಟ್ಟುಕೊಂಡು ಮತ್ತೊಂದು ಆಸ್ಪತ್ರೆಯತ್ತ ಮುಖ ಮಾಡುವಂತಾಗಿದೆ.

  ಪಾತಪಾಳ್ಯ ಆಸ್ಪತ್ರೆ ಕೇಂದ್ರ ಸರ್ಕಾರದ ನ್ಯಾಷನಲ್ ಕ್ವಾಲಿಟಿ ಅಸೆಸ್ಮೆಂಟ್‌ಗೆ ಆಯ್ಕೆಯಾಗಿದ್ದು, ಆಸ್ಪತ್ರೆಯ ಸೇವೆಗಳ ಬಗ್ಗೆ ಕೇಂದ್ರ ಪರಿಶೀಲನೆ ನಡೆಸುತ್ತಿದೆ. ಶನಿವಾರವೂ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಸಮಿತಿ ಸದಸ್ಯರ ಜತೆ ಚರ್ಚೆಯಲ್ಲಿ ತೊಡಗಿದ್ದ ಕಾರಣ ಅಕ್ಷಯ್‌ಗೆ ಚಿಕಿತ್ಸೆಗೆ ದೊರಕಿಲ್ಲ. ಘಟನೆ ಬಗ್ಗೆ ನೋವಿದೆ. ಮುಂದೆ ಹೀಗಾಗದಂತೆ ಎಚ್ಚರ ವಹಿಸಲಾಗುವುದು ಹಾಗೂ ಸಂಬಂಧಪಟ್ಟ ವೈದ್ಯ ಸಿಬ್ಬಂದಿ ಸೂಚಿಸಲಾಗುವುದು.
  ಡಾ. ಸಿ.ಎನ್. ಸತ್ಯನಾರಾಯಣ ರೆಡ್ಡಿ ಟಿಎಚ್‌ಒ, ಬಾಗೇಪಲ್ಲಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts