ಜಮೀನು ವಿವಾದದಲ್ಲಿ ಯುವಕನ ಕೊಲೆ

FotoJet
Published on

ಕನಕಪುರ: ತಾಲೂಕಿನ ಗೆಂಡೆಕೆರೆಯಲ್ಲಿ ಆಸ್ತಿ ವಿಷಯಕ್ಕೆ ಶುಕ್ರವಾರ ರಾತ್ರಿ ಶುರುವಾದ ಜಗಳದಲ್ಲಿ ಯುವಕನೊಬ್ಬ ಬರ್ಬವಾಗಿ ಕೊಲೆಯಾಗಿದ್ದಾನೆ. ತಾಲೂಕಿನ ತುಂಗಣಿ ಗ್ರಾಮದ ಸುನೀಲ್​(30) ಕೊಲೆಯಾದವ. ಪ್ರಕರಣ ಸಂಬಂಧ ಗೆಂಡೆಕೆರೆ ಪಾರ್ಥ, ಅವರ ಪುತ್ರ ಪ್ರೇಮ್​ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ತುಂಗಣಿ ಗ್ರಾಮದ ಜಯಲಕ್ಷ್ಮೀ ಅವರು ದಾಂಪತ್ಯ ಬಿರುಕಿನಿಂದ ಪತಿ ಮುನಿರಾಜು ಅವರನ್ನು ತೊರೆದು ಯಡುವನಹಳ್ಳಿ ಗೇಟ್​ ಬಳಿ ಮಕ್ಕಳೊಂದಿಗೆ ವಾಸವಿದ್ದರು. ಈ ಮಧ್ಯೆ ಮುನಿರಾಜು ಪಿತ್ರಾರ್ಜಿತ ಜಮೀನನ್ನು ಹೆಂಡತಿ, ಮಕ್ಕಳ ಗಮನಕ್ಕೆ ತರದೆ ಗೆಂಡೆಕೆರೆ ಪಾರ್ಥನಿಗೆ ಮಾರಿದ್ದರು. ವಿಷಯ ತಿಳಿದ ಜಯಲಕ್ಷ್ಮೀ ಪುತ್ರರೊಂದಿಗೆ ಪಾರ್ಥ ಅವರ ಮನೆಬಳಿ ಬಂದು ಜಗಳ ಮಾಡಿದ್ದರು. ಈ ವೇಳೆ ಸ್ಥಳಿಯರು ಎರಡೂ ಕಡೆಯವರನ್ನು ಸಮಾಧಾನ ಮಾಡಿ ಕಳುಹಿಸಿದ್ದರು. ಆದರೆ, ತಡರಾತ್ರಿ ಜಯಲಕ್ಷ್ಮೀ ಪುತ್ರರಾದ ಸುನೀಲ್​ ಹಾಗೂ ಕಿರಣ್​ನನ್ನು ರಾಜಿ ನೆಪದಲ್ಲಿ ಗೆಂಡೆಗೆರೆ ಸಮೀಪದ ಜಲ್ಲಿ ಕ್ರಷರ್​ ಬಳಿಗೆ ಕರೆಸಿದ ಪಾರ್ಥ ಹಾಗೂ ಪುತ್ರ ಪ್ರೇಮ್​ ಹಾಗೂ ಮತ್ತಿತರರು ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು, ಸುನೀಲ್​ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ ಎನ್ನಲಾಗಿದ್ದು, ಗಂಭೀರ ಗಾಯಗೊಂಡ ಸುನೀಲ್​ನನ್ನು ಪಾರ್ಥನೇ ಆಸ್ಪತ್ರೆಗೆ ತಂದು ದಾಖಲಿಸಿದ್ದಾನೆ. ವಿಷಯ ತಿಳಿದ ಗ್ರಾಮಾಂತರ ಠಾಣೆ ಸರ್ಕಲ್​ ಇನ್​ಸ್ಪೆಕ್ಟರ್​ ವಿಕಾಸ್​ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲಿಸಿ, ಕಿರಣ್​ನಿಂದ ಮಾಹಿತಿ ಪಡೆದಾಗ ಪ್ರಕರಣ ಬೆಳಕಿಗೆ ಬಂದಿದೆ.

ಅಪಘಾತವೆಂದು ಬಿಂಬಿಸಲು ಯತ್ನ

ಕೊಲೆಯನ್ನು ಅಪಘಾತ ಎಂದು ಬಿಂಬಿಸಲು ಅಪಘಾತದಲ್ಲಿ ಗಾಯಗೊಂಡ ಸುನೀಲ್​ನನ್ನು ನಾನೇ ಆಸ್ಪತ್ರೆಗೆ ದಾಖಲಿಸಿರುವುದಾಗಿ ಪ್ರಕರಣದ ಪ್ರಮುಖ ಆರೋಪಿ ಪಾರ್ಥ ಹೇಳಿದ್ದ. ಆದರೆ ಹಲ್ಲೆ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಹಾಗೆಯೇ ಸುನೀಲ್​ ಸಹೋದರ ಕಿರಣ್​ ಹೇಳಿಕೆ ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

12 ಕೆಕೆಪಿ 1

ಕನಕಪುರ ಕೊಲೆಯಾದ ಸುನೀಲ್​ (30)

12 ಕೆಕೆಪಿ 01

ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಿರಣ್​ನಿಂದ ಕನಕಪುರ ಗ್ರಾಮೀಣ ಪೋಲಿಸರು ಪ್ರಕರಣದ ಮಾಹಿತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net