

ಬೆಂಗಳೂರು: ಒಂದೆಡೆ ಸಾಂಸ್ಕೃತಿಕ ಕಾರ್ಯಕ್ರಮದ ಸೊಗಡು.. ಮತ್ತೊಂದೆಡೆ ಗ್ರಾಮೀಣ ಕ್ರೀಡೆಗಳ ಅಬ್ಬರ... ಕ್ಯಾಂಪಸ್ ತುಂಬ ಬಣ್ಣ ಬಣ್ಣದ ಉಡುಗೆ ತೊಟ್ಟು ಬಂದಿದ್ದ ವಿದ್ಯಾರ್ಥಿಗಳ ಓಡಾಟ... ನೆಚ್ಚಿನ ಸ್ನೇಹಿತರೊಂದಿಗೆ ಸೆಲ್ಫಿ.. 'ಕ್ಷೇತ್ರಪತಿ'ಯ ಗ್ರ್ಯಾಂಡ್ ಎಂಟ್ರಿ... ನಂತರ ಸಿಳ್ಳೆ, ಚಪ್ಪಾಳೆ, ಜೈಕಾರದ ಅಬ್ಬರ!
ಬೆಂಗಳೂರು ನಗರ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗ ಶನಿವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಥಮ 'ಯುವೋತ್ಸವ' ಅಂತರ ತರಗತಿ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಕಂಡುಬಂದ ದೃಶ್ಯಗಳಿವು. ಕಾರ್ಯಕ್ರಮದ ಮೆರಗು ಹೆಚ್ಚಿಸಿದ್ದು, ಶುಕ್ರವಾರ ತೆರೆಕಂಡ 'ಕ್ಷೇತ್ರಪತಿ' ಸಿನಿಮಾದ ನಾಯಕ ನಟ ನವೀನ್ ಶಂಕರ್.
ಯುವೋತ್ಸದಲ್ಲಿ ಸಂಭ್ರಮದಿಂದಲೇ ಪಾಲ್ಗೊಂಡ ನಟ ನವೀನ್ ಶಂಕರ್, ವಿದ್ಯಾರ್ಥಿಗಳೆದುರು ಖಡಕ್ ಡೈಲಾಗ್ ಖುಷಿಪಡಿಸಿದರು. ಈ ವೇಳೆ ಸಭಾಂಗಣದ ತುಂಬೆಲ್ಲ ಶಿಳ್ಳೆ, ಚಪ್ಪಾಳೆಗಳ ಸುರಿಮಳೆ. ಅಷ್ಟರಲ್ಲಿ ಕುವೆಂಪು ಕವನ ವಾಚಿಸಬೇಕೆಂದು ವಿದ್ಯಾರ್ಥಿಗಳಿಂದ ಬೇಡಿಕೆ. ಕೊನೆಗೆ ತಮಟೆ ಸದ್ದಿಗೆ ಟಪ್ಪಾಂಗುಚ್ಚಿ ಡಾನ್ಸ್. ಸೆಲ್ಫಿಗಾಗಿ ಮುಗಿಬಿದ್ದ ಹುಡುಗಿಯರು!
ನಗರ ವಿವಿಯಲ್ಲಿ ಎರಡು ದಿನ ನಡೆದ ಸಾಂಸತಿಕ ಸ್ಪರ್ಧೆಯಲ್ಲಿ ನೃತ್ಯ, ಕಿರುನಾಟಕ, ಸಮೂಹ ಗಾಯನ, ಚಿತ್ರಕಲೆ, ಚರ್ಚಾಸ್ಪರ್ಧೆಗಳು ನಡೆದವು. ಹಾಗೆಯೇ ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಖೋಖೋ ಸೇರಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು. ಇದರಲ್ಲಿ ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದುಕೊಂಡರು.
ಕನ್ನಡದ ಲವಲವಿಕೆ ಇದ್ದಲ್ಲಿ ವಿಶಾಲ ಹೃದಯ ಇದೆ ಎಂದರ್ಥ. ಈ ವಾತಾವರಣ ಯುವೋತ್ಸವದಲ್ಲಿ ಕಂಡುಬಂದಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವ ಬೆಂಗಳೂರು ನಗರ ವಿವಿ ಕಾರ್ಯ ಶ್ಲಾನೀಯ. ಮುಂದೆ ಏನಾಗಬೇಕು ಎಂಬ ಬಗ್ಗೆ ಕನಸು ಕಲಿಕೆಯ ಹಂತದಿಂದಲೇ ಇರಲಿ. ಅದನ್ನು ನನಸು ಮಾಡುವ ತುಡಿತವೂ ಇರಲಿ. ಪರಿಶ್ರಮದಿಂದ ಮುಂದೆ ಸಾಗಿದಾಗ ಖಂಡಿತವಾಗಿಯೂ ಕನಸು ಈಡೇರುತ್ತದೆ ಎಂದು ನಟ ನವೀನ್ ಶಂಕರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿವಿ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಮಾತನಾಡಿ, ಸ್ಪರ್ಧೆ ಎಂದಾಗ ಸೋಲು& ಗೆಲುವು ಸಾಮಾನ್ಯ. ಬಹುಮಾನದ ಬಗ್ಗೆ ಚಿಂತಿಸದೆ ಅನುಭವ ಎಂದು ಭಾಗವಹಿಸಬೇಕು. ಇದರಿಂದ ಶೈಕ್ಷಣಿಕವಾಗಿ ವಿದ್ಯಾರ್ಥಿಗಳು ಬೆಳವಣಿಗೆ ಹೊಂದುತ್ತಾರೆ ಎಂದು ಹೇಳಿದರು.