

ಬೈಲಕುಪ್ಪೆ: ಬೈಲಕುಪ್ಪೆ ಬಿ.ಎಂ.ರಸ್ತೆಯಲ್ಲಿ ಭಾನುವಾರ ರಾತ್ರಿ ರಸ್ತೆ ಬದಿಯಲ್ಲಿ ನಡೆದು ಬರುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಚಿಕ್ಕ ಹೊಸೂರು ಗ್ರಾಮದ ಬಸವರಾಜ ಅವರ ಮಗ ಚೇತನ್ (22) ಮೃತಪಟ್ಟವರು. ಬೈಕ್‌ನ ಹಿಂಬದಿ ಸವಾರ ನಿಖಿಲ್ ಬೈಲಕುಪ್ಪೆ ಕಡೆಯಿಂದ ಪಿರಿಯಾಪಟ್ಟಣಕ್ಕೆ ಬಿ.ಎಂ.ರಸ್ತೆಯಲ್ಲಿ ತೆರಳುವ ವೇಳೆ ಬೈಲಕುಪ್ಪೆ ಪೆಟ್ರೋಲ್ ಬ್ಯಾಂಕ್ ಸಮೀಪ ಮೂತ್ರ ವಿಸರ್ಜನೆಗೆಂದು ಸ್ಕೂಟರ್ ನಿಲ್ಲಿಸಿ ಹೋಗಿದ್ದರು. ಬೈಕ್ ಸವಾರ ಗಾಡಿ ಸಮೀಪಕ್ಕೆ ರಸ್ತೆ ಪಕ್ಕದಲ್ಲಿ ನಡೆದು ಬರುವಾಗ ಈ ಅವಘಡ ಸಂಭವಿಸಿದೆ. ಮೃತನ ಅಣ್ಣ ತೇಜಸ್ ಕೊಟ್ಟ ದೂರಿನ ಮೇರೆಗೆ ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಶಾಲನಗರ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಲಾಯಿತು.