

ಅರಕಲಗೂಡು: ಹೊಸ ವಿದ್ಯಮಾನಗಳಿಗೆ ತೆರೆದುಕೊಳ್ಳುವ ಉದ್ದೇಶದಿಂದ ಯುವಸಮೂಹ ಕೇವಲ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ ಇತರ ವಿಷಯಗಳ ಅಧ್ಯಯನಕ್ಕೆ ಮುಂದಾಗಬೇಕು ಎಂದು ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ನಿವೃತ್ತ ನಿರ್ದೇಶಕ ಡಾ.ಎ.ವಿ.ರಾಮಕೃಷ್ಣ ಸಲಹೆ ನೀಡಿದರು.
ಹಳ್ಳಿಮೈಸೂರು ಹೋಬಳಿ ಜೋಡಿಗುಬ್ಬಿ ವಿಪ್ರ ವೃಂದದವರು ಬೆಂಗಳೂರಿನ ಶೇಷಾದ್ರಿ ರಸ್ತೆ ಬಬ್ಬೂರು ಕಮ್ಮೆ ಸಮುದಾಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜೋಡಿಗುಬ್ಬಿ ವಿಪ್ರವೃಂದದ 11ನೇ ವಾರ್ಷಿಕ ಸಮಾವೇಶದಲ್ಲಿ ಅವರು ಮಾತನಾಡಿದರು.
ಭೂಗರ್ಭಶಾಸ್ತ್ರ, ಪ್ರಾಣಿಶಾಸ್ತ್ರದಲ್ಲಿ ಸಂಶೋಧನೆಗೆ ಹಲವು ಅವಕಾಶಗಳಿವೆ. ಆದರೆ, ಈ ಕುರಿತು ಕೆಲವೇ ಮಂದಿ ಆಸಕ್ತಿ ತೋರುತ್ತಾರೆ. ಈ ಕ್ಷೇತ್ರಗಳನ್ನು ಬಳಸಿಕೊಳ್ಳುವತ್ತ ಯುವಜನರು ಮುಂದಾಗಬೇಕು ಎಂದು ಹೇಳಿದರು.
ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಡಾ ವೈ.ವಿ.ಮುರಳಿ ಮಾತನಾಡಿ, ಸೈನ್ಯದಲ್ಲಿರುವಂತೆ ಶಿಸ್ತನ್ನು ಬದುಕಿನಲ್ಲಿ ಅಳವಡಿಕೊಂಡಾಗ ಉನ್ನತ ಸಾಧನೆ ಸಾಧ್ಯ ಎಂದರು.
ನಿವೃತ್ತ ಕೆಎಎಸ್ ಅಧಿಕಾರಿ ಎ.ವಿ.ಪ್ರಸನ್ನ ಮಾತನಾಡಿ, ವಿಪ್ರವೃಂದದ ಸದಸ್ಯರು ಸಂಪರ್ಕ ಸಾಧಿಸಲು ನೆರವಾಗುವಂತೆ ವಿಪ್ರ ಸಂಪರ್ಕ ದಿಪೀಕಾ ಪುಸ್ತಕ ಪ್ರಕಟಿಸಿರುವ ಕಾರ್ಯ ಪ್ರಶಂಸನೀಯ. ಹಾಸನ ಜಿಲ್ಲೆ ಜೋಡಿ ಗುಬ್ಬಿಯಂತಹ ಸಣ್ಣ ಗ್ರಾಮದ ವಿಪ್ರ ಸಮುದಾಯದವರು ಒಗ್ಗೂಡಿ ಪ್ರತಿವರ್ಷ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಸುತ್ತಾ ಬಂದಿರುವುದು ಹೆಮ್ಮೆಯ ಸಂಗತಿ ಎಂದರು.
ಬಳಗದ ಅಧ್ಯಕ್ಷ ಜಿ.ಎನ್.ರಾಮಚಂದ್ರ ಬಳಗದ ಕಾರ್ಯ ಚಟುವಟಿಕೆ ಕುರಿತು ವಿವರಿಸಿದರು. 2024ನೇ ಸಾಲಿನ ದಿನದರ್ಶಿಕೆ, ವಾರ್ಷಿಕ ಸ್ಮರಣ ಸಂಚಿಕೆ ಹಾಗೂ ವಿಪ್ರ ಸಂಪರ್ಕ ದೀಪಿಕಾ ಪುಸ್ತಕ ಬಿಡುಗಡೆ ಮಾಡಲಾಯಿತು. ಸಾಧಕರು, ಹಿರಿಯ ದಂಪತಿಗಳನ್ನು ಗೌರವಿಸಲಾಯಿತು. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವಿಪ್ರ ಬಳಗದ ಉಪಾಧ್ಯಕ್ಷೆ ಶೈಲಜಾ ಶೇಷಾದ್ರಿ, ಕಾರ್ಯದರ್ಶಿ ಜಿ.ವಿ.ರಮೇಶ್, ಸಹಕಾರ್ಯದರ್ಶಿ ನಾಗು ಪ್ರವೀಣ್, ಶ್ಯಾಮಸುಂದರ್, ರಂಗನಾಥ್ ಇದ್ದರು.