ಕೌಡಿಚ್ಚಾರಲ್ಲಿ ಯುವಕನಿಗೆ ಹಲ್ಲೆ, ಇಬ್ಬರ ಬಂಧನ

New Project (38)
Published on

ಪುತ್ತೂರು ಗ್ರಾಮಾಂತರ: ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಕೌಡಿಚ್ಚಾರಿನಲ್ಲಿ ಶನಿವಾರ ತಡರಾತ್ರಿ ತಂಡವೊಂದು ಅಂಗಡಿ ಮಾಲೀಕರಲ್ಲಿ ಜಗಳವಾಡುತ್ತಿದ್ದ ವೇಳೆ ಪ್ರಶ್ನಿಸಲು ಹೋದಾತಗೆ ನಾಲ್ವರಿದ್ದ ತಂಡವೊಂದು ಹಲ್ಲೆ ನಡೆಸಿದೆ.

ಕೌಡಿಚ್ಚಾರಿನ ಶ್ರವಣ್ ಕುಮಾರ್ ಎಂಬುವರಿಗೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಕಣ್ಣೆಟಿಮಾರು ನಿವಾಸಿ ಸಂಜನ್ ರೈ, ಪಳ್ಳತ್ತೂರು ನಿವಾಸಿ ಪ್ರವೀಶ್ ನಾಯರ್, ಪುತ್ತೂರು ವ್ಯಾಪ್ತಿಯ ರೇವಂತ್ ಮತ್ತು ವಿನೀತ್ ಎಂಬುವರು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.

ನಾನು ಶನಿವಾರ ರಾತ್ರಿ ಮನೆಗೆ ಬೇಕಾದ ಅಗತ್ಯ ವಸ್ತು ಖರೀದಿಸಿಕೊಂಡು ಬರಲು ಕೌಡಿಚ್ಚಾರಿನಲ್ಲಿರುವ ನವೀನ್ ಪಿ.ಜಿ. ಎಂಬುವರ ಅಂಗಡಿಗೆ ಹೋಗಿದ್ದೆ. ಈ ವೇಳೆ ಸಂಜಯ್ ರೈ, ಪ್ರವೀಶ್ ನಾಯರ್, ರೇವಂತ್, ವಿನೀತ್ ಅವರು ಅಂಗಡಿ ಮಾಲೀಕ ನವೀನ್ ಅವರ ಜತೆ ಜಗಳವಾಡುತ್ತಿದ್ದರು. ಈ ವೇಳೆ ನಾನು ಅವರಲ್ಲಿ ಯಾಕೆ ಅವರಿಗೆ ಹೊಡೆಯುತ್ತಿದ್ದೀರಿ ಎಂದು ಪ್ರಶ್ನಿಸಿದ ಕಾರಣಕ್ಕಾಗಿ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ನನ್ನ ಗೆಳೆಯರಾದ ಸಿಂಚನ್, ನವೀನ್ ಹಲ್ಲೆ ತಡೆದಿದ್ದಾರೆ ಎಂದು ಶ್ರವಣ್‌ಕುಮಾರ್ ಸಂಪ್ಯ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಸಂಪ್ಯ ಠಾಣೆ ಪೊಲೀಸರು ಆರೋಪಿಗಳ ಪೈಕಿ ಸಂಜನ್ ರೈ, ಪ್ರವೀಶ್ ನಾಯರ್ ಎಂಬುವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಇಬ್ಬರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net