ಪೊಲೀಸ್ ಮೇಲೆ ಹಲ್ಲೆ ಮಾಡಿದ ಯುವಕರು ಅಂದರ್

Arrest
Published on

ಚನ್ನಪಟ್ಟಣ: 

ಪೊಲೀಸ್ ಪೇದೆಯ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದಡಿಯಲ್ಲಿ ಇಬ್ಬರು ಯುವಕರು ಜೈಲು ಪಾಲಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಪೊಲೀಸ್ ಪೇದೆಯ ಮೇಲೆ ಹಲ್ಲೆ ಮಾಡಿದ ಆರೋಪದ ಮೇರೆಗೆ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಿಸಿರುವ ನಗರ ಪೊಲೀಸರು, ಅವರನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ. ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಸಿದ್ದಾರ್ಥ ಗೌಡ (28), ಸಚಿನ್(28) ಪೊಲೀಸ್ ಪೇದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಬಂಧಿತರಾಗಿರುವ ಯುವಕರು.

ಸಂಚಾರ ಪೊಲೀಸ್ ಠಾಣೆಯ ಪೇದೆ ಜಗದೀಶ್ ಎಂಬುವವರು ಸೋಮವಾರ ರಾತ್ರಿ ಚೀತಾ ವಾಹನದಲ್ಲಿ ಗಸ್ತು ತಿರುಗುವಾಗ, ನಗರದ ಮೂರನೇ ಅಡ್ಡರಸ್ತೆಯ ಕುವೆಂಪುನಗರದ ಬಳಿ ಇಬ್ಬರು ಯುವಕರು ರಸ್ತೆಯಲ್ಲಿಯೇ ಬೈಕ್ ನಿಲ್ಲಿಸಿಕೊಂಡು ಮದ್ಯಪಾನ ಮಾಡುತ್ತಿರುವುದನ್ನು ಕಂಡು ಅವರನ್ನು ಪ್ರಶ್ನಿಸಿದ್ದಾರೆ.

ಈ ವೇಳೆ ಯುವಕರು ಪೊಲೀಸ್ ಪೇದೆಯನ್ನು ಅವಾಚ್ಯಪದಗಳಿಂದ ನಿಂದಿಸಿ, ಅವರ ಕತ್ತಿನ ಕಾಲರ್ ಹಿಡಿದು ಎಳೆದು ಹಲ್ಲೆ ನಡೆಸಿ ಪೇದೆಯ ಮೊಬೈಲ್ ಕಿತ್ತುಕೊಂಡಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೇದೆಗಳಾದ ಪವನ್ ಹಾಗೂ ರಂಗಸ್ವಾಮಿ ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪುರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net