ಹೋಟೆಲ್​ಗೆ ಬಂದ ಯುವತಿಯರಿಗೆ ಫ್ರೆಂಡ್​ಶಿಪ್​ ಮಾಡುವಂತೆ ಚುಡಾಯಿಸಿದ್ದ ಪುಂಡರ ಬಂಧನ

Harrassment
Published on

ಹುಬ್ಬಳ್ಳಿ: ಉಪಹಾರ ಮಾಡಲೆಂದು ಇಲ್ಲಿನ ಅಕ್ಷಯ ಪಾರ್ಕ್​ನ ಹೋಟೆಲ್​ವೊಂದಕ್ಕೆ ಬಂದಿದ್ದ ಇಬ್ಬರು ಯುವತಿಯರಿಗೆ ಫೋನ್​ ನಂಬರ್​ ಕೊಟ್ಟು ಫ್ರೆಂಡ್​ಶಿಪ್​ ಮಾಡುವಂತೆ ಚುಡಾಯಿಸಿದ್ದ ಐವರು ಪುಂಡರನ್ನು ಗೋಕುಲ ರೋಡ್​ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಹಳೇ ಹುಬ್ಬಳ್ಳಿಯ ಮಹ್ಮದ್​ ಯೂಸೂಫ್ ತಟಗಾರ, ನೂರ್​ ಅಹ್ಮದ್​ ಕಾಲೇಗಾರ, ಮಹಮ್ಮದ ಸಾದಿಕ್​ ಅತ್ತಾರ, ತಾಹೀರ್​ ಅಹ್ಮದ ಇಸಾಮದಿ ಹಾಗೂ ಶಾಹೀನ್​ಸಾ ಸಾಸವಾಡ ಬಂಧಿತ ಆರೋಪಿಗಳು.

ಯುವತಿಯರಿಬ್ಬರು ಹೋಟೆಲ್​ಗೆ ಆಗಮಿಸಿದ್ದರು. ಈ ವೇಳೆ ಹೋಟೆಲ್​ಗೆ ಬಂದ ಯುವಕರ ಗುಂಪು ಯುವತಿಯರನ್ನೇ ನೋಡುವುದು, ಚುಡಾಯಿಸುವುದು ಮಾಡುತ್ತಿದ್ದರು. ಚೀಟಿಯಲ್ಲಿ ಫೋನ್​ ನಂಬರ್​ ಬರೆದು ಕೊಟ್ಟು ಫ್ರೆಂಡ್​ಶಿಪ್​ ಮಾಡುವಂತೆ ಒತ್ತಾಯಿಸಿದ್ದರು. ನಂತರ ಬೈಕ್​ನಲ್ಲಿ ಹಿಂಬಾಲಿಸಿಕೊಂಡು ಹೋಗಿ ತೊಂದರೆ ಕೊಟ್ಟಿದ್ದಾರೆ.

ಈ ಕುರಿತು ಯುವತಿಯರು ಗೋಕುಲ ರೋಡ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇನ್​ಸ್ಪೆಕ್ಟರ್​ ಜೆ.ಎಂ. ಕಾಲಿಮಿರ್ಚಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net