ಮೌಢ್ಯ ನಿರ್ಮೂಲನೆಗೆ ಯುವ ವಿಜ್ಞಾನಿಗಳು ಅಗತ್ಯ

FotoJet (1)
Published on

ಶಿಕ್ಷಣ ಸಂಯೋಜಕ ಯು.ವೈ.ಮಂಜುನಾಥ್ ಅಭಿಮತ

 ಶಿಡ್ಲಘಟ್ಟ : ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ವೈಚಾರಿಕತೆ, ಚಿಂತನಾಶೀಲತೆ, ಪ್ರಶ್ನಿಸುವ ಗುಣ, ವೈಜ್ಞಾನಿಕ ಮನೋಭಾವನೆ ಬೆಳೆಸಬೇಕು. ವಿಜ್ಞಾನ ವಿಷಯ ಅರಿತಾಗ ಸಮಾಜದಲ್ಲಿನ ಅನೇಕ ಮೌಢ್ಯಗಳನ್ನು ತೊಡೆದುಹಾಕಬಹುದು. ಆದ್ದರಿಂದ ರಾಷ್ಟ್ರಕ್ಕೆ ಯುವವಿಜ್ಞಾನಿಗಳ ಅಗತ್ಯವಿದೆ ಎಂದು ಶಿಕ್ಷಣ ಸಂಯೋಜಕ ಯು.ವೈ.ಮಂಜುನಾಥ್ ತಿಳಿಸಿದರು.

ತಾಲೂಕು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಬೆಂಗಳೂರಿನ ವಿಶ್ವೇಶ್ವರಯ್ಯ ವಿಜ್ಞಾನ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ ಆಶ್ರಯದಲ್ಲಿ ತಾಲೂಕಿನ ನಡಿಪಿನಾಯಕನಹಳ್ಳಿ ನವೋದಯ ವಸತಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ವಿಜ್ಞಾನ ವಸ್ತುಪ್ರದರ್ಶನ, ವಿಜ್ಞಾನ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ಭಾರತೀಯ ಋಷಿಗಳು ವಿಜ್ಞಾನಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ದೇಶದಲ್ಲಿ ಬಹಳ ಹಿಂದೆಯೇ ವೈಜ್ಞಾನಿಕ ಸಂಶೋಧನೆ, ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಸಾಧನೆಯಾಗಿತ್ತು. ಭಾರತೀಯ ವಿಜ್ಞಾನಿಗಳು ಪ್ರಪಂಚದಲ್ಲಿಯೇ ಉತ್ತಮ ಸಾಧನೆ ಮಾಡಿದ್ದು, ಇತರ ದೇಶದ ವಿಜ್ಞಾನಿಗಳಿಗೆ ಮಾದರಿಯಾಗಿದ್ದಾರೆ ಎಂದರು.

ಮುಖ್ಯಶಿಕ್ಷಕ ಎನ್.ಕೆ.ಸತ್ಯನಾರಾಯಣ್ ಮಾತನಾಡಿ, ಜೀವನದ ಪ್ರತಿ ಚಟುವಟಿಕೆಯಲ್ಲಿ ವೈಜ್ಞಾನಿಕ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಕಲಿಕೆಯೊಂದಿಗೆ ವಿಜ್ಞಾನ ಪ್ರಯೋಗ ಮಾಡುವ ಮೂಲಕ ಅನ್ವೇಷಣಾ ಗುಣ ವೃದ್ಧಿಸಿಕೊಳ್ಳಬೇಕು. ವಿಜ್ಞಾನದ ಅನುಭವಗಳ ಮೂಲಕ ಹೊಸತನ್ನು ಅನ್ವೇಷಣೆ ಸಾಧ್ಯ ಎಂದರು.

ತಾಲೂಕು ಪ್ರೌಢಶಾಲೆ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಪ್ರಸ್ತುತ ಪಾಲಕರು ಇಂಜಿನಿಯರಿಂಗ್, ವೈದ್ಯಕೀಯ ವಿಜ್ಞಾನದೆಡೆಗೆ ಮಕ್ಕಳು ಸಾಗಬೇಕೆಂದು ಆಲೋಚಿಸುತ್ತಾರೆ. ಆದರೆ, ಮೂಲವಿಜ್ಞಾನಕ್ಕೆ ಆದ್ಯತೆ ನೀಡುವುದು ಅಗತ್ಯವಾಗಿದೆ. ವಿಜ್ಞಾನವನ್ನು ಅಭಿವೃದ್ಧಿ, ವಿನಾಶಕ್ಕೂ ಬಳಸಬಹುದು. ಮೌಢ್ಯಗಳ ಆಚರಣೆ, ಮೂಢನಂಬಿಕೆಗಳಿಗೆ ಸಾಕಷ್ಟು ಮಂದಿ ಮೋಸ ಹೋಗುತ್ತಿದ್ದಾರೆ. ಜ್ಯೋತಿಷ, ಖಗೋಳದಂತಹ ವಿಷಯಗಳನ್ನು ವೈಜ್ಞಾನಿಕವಾಗಿ ಅರಿಯಬೇಕು ಎಂದರು.

ನಾಟಕ ಪ್ರದರ್ಶನ
ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ವೈಯಕ್ತಿಕ ಮತ್ತು ಗುಂಪು ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಗಣಕಯಂತ್ರ ವಿಜ್ಞಾನ, ಭೂಮಿ ಮತ್ತು ಬಾಹ್ಯಾಕಾಶ, ಪರಿಸರ ವಿಜ್ಞಾನ, ಇಂಜಿನಿಯರಿಂಗ್, ಜೈವಿಕವಿಜ್ಞಾನ, ಜೀವರಸಾಯನಶಾಸ್ತ್ರ ವಿಷಯಗಳಲ್ಲಿ ಅನೇಕ ಮಾದರಿಗಳು ಪ್ರದರ್ಶನಗೊಂಡವು. ಕೃತಕ ಬುದ್ಧಿಮತ್ತೆ-ಸಂಭವನೀಯತೆ ಮತ್ತು ಕಾಳಜಿ ಕುರಿತ ವಿಚಾರಗೋಷ್ಠಿ ಮತ್ತು ಗ್ಲೋಬಲ್ ವಾಟರ್ ಕ್ರೈಸಿಸ್, ಪ್ರಾಕೃತಿಕ ವಿಕೋಪಗಳ ನಿರ್ವಹಣೆ, ಆರೋಗ್ಯ ಮತ್ತು ನೈರ್ಮಲ್ಯ, ಹವಾಮಾನ ವೈಪರೀತ್ಯ ವಿಷಯಗಳಲ್ಲಿ ವಿಜ್ಞಾನ ನಾಟಕ ಪ್ರದರ್ಶನ ನಡೆಯಿತು. ವಿಜೇತರಿಗೆ ಪ್ರಶಸ್ತಿಪತ್ರ, ಬಹುಮಾನ ವಿತರಿಸಲಾಯಿತು.

ಶಿಕ್ಷಕರಾದ ಜಿ.ಲಕ್ಷ್ಮೀಪ್ರಸಾದ್, ಸಿ.ಪ್ರಶಾಂತಕುಮಾರ್, ವಿಶ್ವನಾಥ್, ಬೃಂದಾ, ಸವಿತಾ, ದ್ಯಾವಪ್ಪ, ಮನ್ಸೂರ್‌ಪಾಶಾ, ಉಮಾಶಂಕರ್, ಚೌಡರೆಡ್ಡಿ, ಮುನಿರಾಜು, ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net